“ದೇಶದ ಪ್ರಜೆಗಳಾದ ನಾವುಗಳು ಪ್ರಜಾಪ್ರಭುತ್ವದ ಅಡಿಯಲ್ಲಿ ಜೀವಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಇಲ್ಲಿ ಸಮಾನ ಅವಕಾಶಗಳಿವೆ. ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವದಡಿ ಜೀವಿಸುವ ಹಕ್ಕಿದೆ” ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.
ಹಾವೇರಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಸಂವಿಧಾನವು ನಮ್ಮ ಉಸಿರು ಇದ್ದಹಾಗೆ. ಸಂವಿಧಾನವನ್ನು ನಾವು ಗೌರವಿಸಬೇಕು ಸಂವಿಧಾನದಿಂದ ಪ್ರಜಾಪ್ರಭುತ್ವದಲ್ಲಿ ಹೇಗೆ ಜೀವಿಸಬೇಕು ಎಂಬುವುದನ್ನು ತಿಳಿದುಕೊಂಡಿದ್ದೇವೆ ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ, ಬದುಕುವ ಹಕ್ಕು ಜೊತೆಗೆ ಕರ್ತವ್ಯಗಳನ್ನು ಪಡೆದುಕೊಂಡಿದ್ದೇವೆ. ಇಲ್ಲಿ ಯಾರು ಹೆಚ್ಚು ಮತ್ತು ಕಡಿಮೆ ಎನ್ನುವ ಮನೋಭಾವನೇ ಇಲ್ಲ. ಎಲ್ಲರಿಗೂ ಸಮಾನ ಅವಕಾಶಗಳಿವೆ” ಎಂದರು.
“ಸರ್ಕಾರವು ಪ್ರಜಾಪ್ರಭುತ್ವ ದಿನಾಚರಣೆಗೆ ಹೆಚ್ಚು ಮಹತ್ವ ನೀಡುತ್ತಾ ಬಂದಿದೆ ಕಳೆದ ವರ್ಷ ಮಾನವ ಸರಪಳಿ ನಿರ್ಮಿಸುವುದರ ಮೂಲಕ ವಿಶ್ವದಾಖಲೆ ಮಾಡಲಾಗಿದೆ ಈ ವರ್ಷ ನನ್ನ ಮತ ನನ್ನ ಹಕ್ಕು ಎಂಬ ಧೇಯ ವಾಕ್ಯದೊಂದಿಗೆ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ” ಎಂದರು.
ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ, “ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭಾಗವಹಿಸುವಿಕೆ, ಉತ್ತರದಾಯಿತ್ವ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲವರ್ಧನೆ ಮಾಡಿ ಜನರಲ್ಲಿ ಅರಿವು ಮೂಡಿಸುವ ಕೆಲಸಮಾಡಬೇಕು. ವಿವಿಧ ಆಡಳಿತ ವ್ಯವಸ್ಥೆಗಳಾದ ಚಕ್ರಾಧಿಪತ್ಯ, ರಾಜಪ್ರಭುತ್ವ, ನಿರಂಕುಶ ಪ್ರಭುತ್ವ ಈ ಎಲ್ಲ ವ್ಯವಸ್ಥೆಗಳಲ್ಲಿ ಒಳ್ಳೆಯ ಆಡಳಿತ ನೀಡುವ ವ್ಯವಸ್ಥೆ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ” ಎಂದರು.
“ಕೆನಡಾ ಲೇಖಕರಾದ ನವಮಿ ರವರ ಪ್ರಕಾರ ಒಬ್ಬ ಮನುಷ್ಯ ಕೇವಲ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆಗುವುದಿಲ್ಲ. ಒಬ್ಬ ಮನುಷ್ಯ ಹೇಗೆ ಗೌರವಯುತವಾಗಿ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಾನೆ ಎಂಬುದು ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದೆ” ಎಂಬುವುದನ್ನು ತಿಳಿಸದ್ದಾರೆ.
“ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ಯಾರ ಹಸ್ತಕ್ಷೇಪ ವಿಲ್ಲದೆ ಸ್ವತಂತ್ರವಾಗಿರಬೇಕು. ಸ್ವಾತಂತ್ರ್ಯ ಹಕ್ಕುಗಳು. ಸಮಾನ ಕಾನೂನುಗಳು ಇರಬೇಕು. ವ್ಯವಸ್ಥಿತ ವಿರೋಧ ಪಕ್ಷವಿರಬೇಕು ಆಗ ಆಡಳಿತ ಪಕ್ಷವನ್ನು ಹತೋಟಿಗೆ ತರಲು ಸಹಕಾರಿಯಾಗಲಿದೆ” ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆಂಜನೇಯ ಹುಲ್ಲಾಳ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಎಸ್ ಎಫ್ ಎನ್ ಗಾಜಿಗೌಡ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ. ನಗರ ಸಭೆ ಸದಸ್ಯರು ಸಂಜೀವಕುಮಾರ ನೀರಲಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿ ಪ್ರಶಾಂತ ಎಂ ವರಗಪ್ಪನವರ,ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.