“ದೇಶದಲ್ಲಿ ಮೊದಲು ರಾಜರ ಆಡಳಿತ ಇತ್ತು. ಬಲಿಷ್ಟರು, ಪರಾಕ್ರಮಿಗಳು ಪ್ರಜೆಗಳನ್ನು ಆಳುತ್ತಿದ್ದರು. ಆದರೆ, ಈಗ ರಾಜಪ್ರಭುತ್ವ ವ್ಯವಸ್ಥೆ ಇಲ್ಲ, ಸ್ವಾತಂತ್ರ್ಯಾ ನಂತರ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದು, ನಾವೇ ನಮ್ಮ ನಾಯಕರನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿಕೊಳ್ಳುತ್ತೇವೆ. ಆದರೂ ದೇಶದಲ್ಲಿ ಜಾತಿ, ಧರ್ಮದ ಆಧಾರಗಳಲ್ಲಿ ಮತ ಚಲಾವಣೆ ಆಗುತ್ತಿರುವುದು ಕಳವಳಕಾರಿ ಸಂಗತಿ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಂಜಿತ್ ಕುಮಾರ್ ಬಂಡಾರು ಆತಂಕ ವ್ಯಕ್ತಪಡಿಸಿದರು.
“ಯಥಾ ರಾಜ- ತಥಾ ಪ್ರಜಾ’ ಎಂಬ ನಾಣ್ನುಡಿ ಇತ್ತು, ಆದರೆ ಈಗ ಕಾಲ ಬದಲಾಗಿದೆ. ‘ಯಥಾ ಪ್ರಜಾ-ತಥಾ ರಾಜಾ’ ಎಂಬತಾಗಿದೆ. ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟಿಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಾಗಬೇಕು. ಪ್ರಜಾಪ್ರಭುತ್ವ ಹಾಗೂ ಮತದಾನದ ಮೌಲ್ಯ ಅರಿಯದಿದ್ದರೆ ಮತ್ತೆ ನಾವು ಹಿಂದಿನ ಯುಗಕ್ಕೆ ಮರಳಬೇಕಾಗುತ್ತದೆ” ಎಚ್ಚರಿಸಿದರು.

“ಬೇರೆ ದೇಶಗಳಿಗೆ ಹೋಲಿಸಿದಾಗ, ನಮ್ಮ ದೇಶ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಹೀಗಾಗಿ ದೇಶದ ಭವ್ಯ ಭವಿಷ್ಯ ಯುವ ಪೀಳಿಗೆಯ ಕೈಯಲ್ಲಿದೆ. ಅಂಬೇಡ್ಕರ್ ಅವರು ಸಂವಿಧಾನ, ಪ್ರಜಾಪ್ರಭುತ್ವ ಎಂಬ ಅಸ್ತ್ರವನ್ನು ನಮಗೆ ಕೊಟ್ಟಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಲಿದೆ” ಎಂದು ತಿಳಿಸಿದರು.
ಚಳ್ಳಕೆರೆಯ ಸಹಾಯಕ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಉಪನ್ಯಾಸ ನೀಡಿ, “ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿ ಹಿಡಿಯುವ ಉದ್ದೇಶದಿಂದ 2007ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಕರೆಕೊಟ್ಟಿತು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪ್ರಜಾಪ್ರಭುತ್ವದ ಮೌಲ್ಯಗಳಾಗಿದ್ದು, ದೇಶವನ್ನು ಯಾವುದೇ ಧರ್ಮ, ದೇವರು, ದೇವತೆಗಳು ಆಳುವುದಿಲ್ಲ, ಸಾಮಾನ್ಯ ಪ್ರಜೆಗಳೇ ದೇಶವನ್ನು ಆಳುತ್ತಾರೆ. ಪ್ರಜಾಪ್ರಭುತ್ವವು ದ್ವೇಷ, ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕಿ ಐಕ್ಯಮತವನ್ನು ತರುತ್ತದೆ” ಎಂದು ಹೇಳಿದರು.
“ಪ್ರಜಾಪ್ರಭುತ್ವವು ವರ್ಗ ಅಥವಾ ಜಾತಿಪದ್ಧತಿಯ ಸಾಮಾಜಿಕ ರಚನೆಯಿಂದ ಹೀನವಾಗುತ್ತದೆ. ಇಂಥ ಪ್ರತ್ಯೇಕತೆಯ ವ್ಯವಸ್ಥೆಯಲ್ಲಿ ಭ್ರಾತೃತ್ವ ಜೀವಿಸಲು ಸಾಧ್ಯವೇ? ಸಹೋದರತ್ವ ಇಲ್ಲದ ಸಮಾಜದಲ್ಲಿ ಪ್ರಜಾಪ್ರಭುತ್ವವು ಅಗೋಚರವಾಗುತ್ತದೆ. ಸಮಾಜದಲ್ಲಿ ಬಡತನ, ಹಸಿವುಗಳಂತಹ ಅಂಶಗಳು ಪ್ರಜಾಪ್ರಭುತ್ವಕ್ಕೆ ತೊಡಕಾಗಿ ಪರಿಣಮಿಸಿವೆ. ಜನ ತಮ್ಮ ಹೊಟ್ಟೆಪಾಡಿಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ತ್ಯಜಿಸಿ ಖಾಸಗಿ ಅಥವಾ ಬಂಡವಾಳಶಾಹಿ ಒಡೆತನದಲ್ಲಿ ಬವಣಿಸುತ್ತಿದ್ದಾರೆ” ಎಂದು ತಿಳಿಸಿದರು.
“ಸಂವಿಧಾನ ಜಾರಿಯಾದ ದೇಶದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ಪ್ರಭುತ್ವ ಸಾಧಿಸಿದರೆ ಖಂಡಿತವಾಗಿಯೂ ನಿರಂಕುಶ ಪ್ರಭುತ್ವಕ್ಕೆ ದಾರಿಯಾಗುತ್ತದೆ. ಪ್ರಜಾತಂತ್ರವು ಕಡ್ಡಾಯ ಶಿಕ್ಷಣ, ಸಮಾನ ಸೌಕರ್ಯಗಳು, ದುರ್ಬಲರಿಗೆ ವಿಶೇಷ ಸೌಲಭ್ಯಗಳು ಮತ್ತು ಆರ್ಥಿಕ ಸ್ಥಾನಮಾನಗಳ ಧರ್ಮ, ಜಾತಿಗಳನ್ನು ಮೀರಿ ಸಮಾನ ತತ್ವದ ಅವಕಾಶನ್ನು ಕಲ್ಪಿಸುತ್ತದೆ” ಎಂದು ಅರ್ಥೈಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಂವಿಧಾನದ ಪೀಠಿಕೆ, ಪ್ರತಿಜ್ಞಾ ವಿಧಿ ಬೋಧಿಸಿದರು. ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೈಕಲ್ ಮತ್ತು ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಸೈಕಲ್ ಹಾಗೂ ಬೈಕ್ ರ್ಯಾಲಿಯು ಮಹಾತ್ಮಾಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದ ಮೂಲಕ ಮತ್ತೆ ಪುನಃ ಜಿಲ್ಲಾಧಿಕಾರಿಗಳ ಕಚೇರಿವರೆಗೂ ನಡೆಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಯುವಪೀಳಿಗೆಗೆ ಪ್ರಜಾಪ್ರಭುತ್ವದ ಅರಿವು ಮುಖ್ಯ: ಸಿಇಓ ಡಾ ಆಕಾಶ್
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ನಗರಸಭೆ ಅಧ್ಯಕ್ಷೆ ಎಂ.ಪಿ. ಅನಿತಾ ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಗಣ್ಯರಾದ ರಮೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ತಹಶೀಲ್ದಾರ್ ಗೋವಿಂದರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.