ಧರ್ಮಸ್ಥಳ ಗ್ರಾಮಕ್ಕೆ ಅಂಟಿಕೊಂಡ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತೆ ವ್ಯಾಪಕ ಶೋಧ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆಗಳು, ಮೂರ್ನಾಲ್ಕು ತಲೆಬುರುಡೆಯನ್ನು ಸ್ಥಳ ಮಹಜರು ವೇಳೆ ನೋಡಿದ್ದೆ ಎಂದು ವಿಡಿಯೋ ಮಾಡಿ ವಿಠಲಗೌಡ ಹರಿಬಿಟ್ಟಿದ್ದರು. ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ನೋಡಿದ್ದಾಗಿಯೂ ಹೇಳಿರುವುದರಿಂದ ಇಂದು ಮತ್ತೆ ಬಂಗ್ಲೆಗುಡ್ಡೆಗೆ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಉತ್ಖನನ ಮಾಡುವ ಸಾಧ್ಯತೆಯೂ ಇದೆ.
ಸಾಕ್ಷಿ ದೂರುದಾರ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ತಲೆಬುರುಡೆ ಇದ್ದ ಆ ಜಾಗವನ್ನು ತೋರಿಸಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಈಚೆಗೆ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಆ ಜಾಗವು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿದೆ.
ಎಸ್‌ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಕೆಲ ಅಧಿಕಾರಿಗಳನ್ನು ಬೆಳ್ತಂಗಡಿ ಕಚೇರಿಗೆ ಸೋಮವಾರ ಕರೆಸಿಕೊಂಡು ಚರ್ಚಿಸಿದ್ದಾರೆ. ಸಾಕ್ಷಿ ದೂರುದಾರ ತಂದೊಪ್ಪಿಸಿರುವ ತಲೆಬುರುಡೆಯನ್ನು ಹೊರತೆಗೆದ ಕಾಡಿನಲ್ಲಿ ಮತ್ತಷ್ಟು ಶೋಧ ನಡೆಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಎಸ್‌ಐಟಿ ಸಮಾಲೋಚನೆ ನಡೆಸಿದೆ.
ಒಂದು ವೇಳೆ ಶೋಧಕಾರ್ಯ ಮಂಗಳವಾರ ನಡೆಯದಿದ್ದರೂ, ಈ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಎಸ್ ಐಟಿ ಅಧಿಕಾರಿಗಳ ಮುಂದಿನ ನಡೆ ಭಾರೀ ಕುತೂಹಲ ಮೂಡಿಸಿದೆ.
ವಿಡಿಯೋದಲ್ಲಿ ವಿಠಲಗೌಡ ಹೇಳಿದ್ದೇನು?
“ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವ ವೇಳೆಯಲ್ಲಿ ಅಲ್ಲೆ, 3 ಮನುಷ್ಯರ ಕಳೆಬರ ಹತ್ತು ಹತ್ತು ಫೀಟ್‌ನಲ್ಲೇ ಸಿಗುತ್ತದೆ. ಎರಡನೇ ಬಾರಿ ಸ್ಥಳ ಮಹಜರಿಗೆ ಹೋಗುವಾಗ ಕೆಳಗಡೆ ಹೆಣಗಳ ರಾಶಿ. ನಮಗೆ ಕಣ್ಣಿಗೆ ಕಾಣುವುದು ಐದು ಇದ್ದವು, ಇದರಲ್ಲಿ ಒಂದು ಮಗುವಿನ ಎಲುಬುಗಳು ಎಂಬುದು ಗೋಚರ ಆಗ್ತಿತ್ತು, ಪಕ್ಕದಲ್ಲೇ ವಾಮಾಚಾರಕ್ಕೆ ಬಳಸುವ ಸಣ್ಣಸಣ್ಣ ಕಲಶಗಳು ಐದಾರು ಇದ್ದವು, ಇದನ್ನು ನಾನೂ ನೋಡಿದ್ದೇನೆ, ಅಧಿಕಾರಿಗಳಿಗೂ ತೋರಿಸಿದ್ದೇನೆ. ಮತ್ತೆ ಹೆಣ ಮುಚ್ಚಿಹಾಕಲು ಗುಡ್ಡ ಜರಿದ ರೀತಿ, ಮಣ್ಣು ಎಳೆದು ಹಾಕಿದ ರೀತಿ ಕಾಣುತ್ತದೆ. ಐದಾರು ಫೀಟ್ ದೂರದಲ್ಲಿ ಬುರುಡೆಗಳ ರಾಶಿ ಇದೆ” ಎಂದು ವಿಠಲಗೌಡ ಹೇಳಿದ್ದಾರೆ.
ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಧರ್ಮಸ್ಥಳದ ಗ್ರಾಮದಲ್ಲಿ ನಾವು ಗುರುತಿಸಿರುವ ಸ್ಥಳಗಳಲ್ಲಿ ಕೂಡಲೇ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕು ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ಮನೆಯ ನಿವಾಸಿ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.