ವಾಲ್ಮೀಕಿ ನಿಗಮ ಅಕ್ರಮ | ಬಿಜೆಪಿಗೂ ಅಂಟಿದ ಕಳಂಕ? ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

Date:

Advertisements

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಈ ಹಿನ್ನೆಲೆ ಸಿಬಿಐ ಅಧಿಕಾರಿಗಳು ಕರ್ನಾಟಕ-ಆಂಧ್ರ ಪ್ರದೇಶ ಸೇರಿದಂತೆ 16 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಳ (ಕೆಜಿಟಿಟಿಐ) ಖಾತೆಯಿಂದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸೋದರಿ ಮತ್ತು ಸಂಬಂಧಿಕರು ಹಾಗೂ ಆಪ್ತರ ಖಾತೆಗೆ ಹಣ ವರ್ಗಾವಣೆಯಾಗಿದೆ ಎನ್ನುವ ಆರೋಪದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ.

ಕರ್ನಾಟಕದಲ್ಲಿ 12 ಕಡೆ ಮತ್ತು ಆಂಧ್ರ ಪ್ರದೇಶದ 4 ಕಡೆಗಳಲ್ಲಿ ಸಿಬಿಐ ಶೋಧ ನಡೆದಿದೆ. ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದರಾಜು ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಏಕಾಏಕಿ ದಾಳಿ ನಡೆಸಿ ಖಾತೆಗಳು, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಮೊಟ್ಟೆ ವ್ಯಾಪಾರಿಯಾಗಿದ್ದ ಗೋವಿಂದರಾಜು ಹಗರಣದ ಮತ್ತೋರ್ವ ಆರೋಪಿ ನೆಕ್ಕಂಟಿ ನಾಗರಾಜ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂಬ ಆರೋಪವಿದೆ. ಈ ಹಣವನ್ನು ವ್ಯಾಪಾರ ಸೇರಿದಂತೆ ಬೇರೆ ಬೇರೆ ಕಡೆ ಹೂಡಿಕೆ ಮಾಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿ ನಾಗೇಂದ್ರ ಅವರ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಇದನ್ನೇ ‌ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದರು. ಆದರೆ ಇದೀಗ ಇದೇ ಪ್ರಕರಣ ಸಂಬಂಧ ಬಿಜೆಪಿ ಮುಖಂಡನ ಮನೆ ಮೇಲೂ ಸಿಬಿಐ ದಾಳಿ ಮಾಡಿದೆ. ಈ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನುವ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಹಗರಣದಲ್ಲಿ ಹೆಸರು ಕೇಳಿಬಂದಿರುವ ಕುಮಾರಸ್ವಾಮಿ ಜೊತೆ ಗೋವಿಂದರಾಜು ಆತ್ಮೀಯತೆ ಇಟ್ಟುಕೊಂಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನೆಕ್ಕಂಟಿ ನಾಗರಾಜ್‌ ಮತ್ತು ಗೋವಿಂದರಾಜು ಅವರ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಗೋವಿಂದರಾಜು ಅವರು ಮನೆ ಖರೀದಿಗಾಗಿ ಹಗರಣದ ಆರೋಪಿ ಶಾಸಕ ಬಿ.ನಾಗೇಂದ್ರ, ನೆಕ್ಕಂಟಿ ನಾಗರಾಜ್ ಮೂಲಕ ವ್ಯವಹಾರ ನಡೆಸಿದ್ದು, ಅದಕ್ಕೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರುವ ಆರೋಪವೂ ಇದೆ.

ಹಾಗೆಯೇ ವರ್ಗಾವಣೆಯಾದ ಹಣವನ್ನು ನಾಗೇಂದ್ರ ಅವರು ತೆಲಂಗಾಣ ವಿಧಾನಸಭೆ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಬಿ.ನಾಗೇಂದ್ರ ಅಧಿಕಾರ ದುರುಪಯೋಗಪಡಿಸಿಕೊಂಡು 88 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ಉಲ್ಲಂಘನೆ ಮಾಡಿದ್ದಾರೆಂದು ಜಾರಿನಿರ್ದೇಶನಾಲಯ(ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ

ಸಹೋದರಿ, ಸೋದರ ಮಾವನ ಖಾತೆ ಹಣ

ಬ್ಯಾಂಕ್ ಆಫ್‌ ಬರೋಡಾದ ಸಿದ್ದಯ್ಯ ರಸ್ತೆ ಶಾಖೆಯಲ್ಲಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಖಾತೆಯಿಂದ ಎಸ್‌ಕೆಆರ್ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಗೋಲ್ಡನ್ ಎಸ್ಟಾಬ್ಲಿಷ್‌ಮೆಂಟ್‌ ಸಂಸ್ಥೆಗಳಿಗೆ ₹2.17 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ಸಂಸ್ಥೆಗಳು ಬಿ. ನಾಗೇಂದ್ರ ಅವರ ಆಪ್ತರಾದ ನೆಕ್ಕಂಟಿ ನಾಗರಾಜ್ ಅವರಿಗೆ ಸೇರಿದ್ದಾಗಿವೆ. ಈ ಮೊತ್ತದಲ್ಲಿ ಸುಮಾರು ₹1.20 ಕೋಟಿಯಷ್ಟು ನಾಗೇಂದ್ರ ಅವರ ಸಹೋದರಿ, ಸೋದರ ಮಾವ ಮತ್ತು ಆಪ್ತ ಸಹಾಯಕ ಸೇರಿದಂತೆ ಅವರ ಸಹಚರರು ಹಾಗೂ ಸಂಬಂಧಿಕರ ಖಾತೆಗಳಿಗೆ ವರ್ಗವಾಗಿದೆ.

ಪ್ರಕರಣದ ಹಿನ್ನೆಲೆ

ವಾಲ್ಮೀಕಿ ನಿಗಮದ ಲೆಕ್ಕಪತ್ರ ವಿಭಾಗದ ಚಂದ್ರಶೇಖರ್‌ ಪಿ. ಎಂಬ ಅಧಿಕಾರಿ 2024 ಮೇ 26ರಂದು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಈ ಹಗರಣ ಸ್ಫೋಟವಾಗಿತ್ತು. ಈ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚನೆ ಮಾಡಿತ್ತು. ಈ ನಡುವೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಕಾರಣ ಇ.ಡಿ. ಕೂಡ ಪ್ರವೇಶಿಸಿ ತನಿಖೆ ತೀವ್ರಗೊಳಿಸಿತ್ತು.

ಇ.ಡಿಯು 2024ರ ಜುಲೈನಲ್ಲಿ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿ, 2025ರ ಜೂನ್ನಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ಬಿಜೆಪಿ ನಾಯಕರು ಈ ದಾಳಿಯನ್ನು ರಾಜಕೀಯ ಪ್ರತೀಕಾರ ಎಂದು ಟೀಕಿಸಿದ್ದರು.

ಹಗರಣದ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ 20.19 ಕೋಟಿ ರೂ.ಗಳನ್ನು ಹಣವಾಗಿ ವಿತರಿಸಲಾಗಿದೆ ಎಂದು ಇಡಿ ಆರೋಪಿಸಿದೆ. ನಾಗೇಂದ್ರ ಅವರ ಸಹಾಯಕ ವಿಜಯ್‌ಕುಮಾರ್‌ ಗೌಡಾ ಅವರ ಮೊಬೈಲ್‌ನಲ್ಲಿ ಚುನಾವಣೆ ವೆಚ್ಚದ ನೋಟ್‌ ಸಿಕ್ಕಿದ್ದು, ಇದು ಹಗರಣದೊಂದಿಗೆ ಸಂಬಂಧ ಹೊಂದಿದೆ. ಯೂನಿಯನ್‌ ಬ್ಯಾಂಕ್‌ ಇಂಡಿಯಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದು, ಹೈಕೋರ್ಟ್‌ 2025ರ ಜುಲೈನಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದೆ.

ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಬಂಧನವಾಗಿತ್ತು. ನಾಗೇಂದ್ರ ಈಗ ಜಾಮೀನಿನ ಮೇಲೆ ಇದ್ದಾರೆ. ಈಗ ಸಿಬಿಐ ಕೂಡ ತನಿಖೆ ತೀವ್ರಗೊಳಿಸಿರುವುದರಿಂದ ಅವರಿಗೆ ಸಂಕಷ್ಟ ಎದುರಾದಂತಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

Download Eedina App Android / iOS

X