‘ಸಂಗೀತ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಕುಂದಗೋಳದಲ್ಲಿ, ದಿ. ಸವಾಯಿ ಗಂಧರ್ವರ 73ನೇ ಪುಣ್ಯತಿಥಿಯ ನಿಮಿತ್ತ ಅಹೋರಾತ್ರಿ ಸಂಗೀತ ಮಹೋತ್ಸವ ಆರಂಭಗೊಂಡಿದೆ. ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆನೀಡಿ, ಮಾತನಾಡಿ, ಭಾರತೀಯರ ಜೀವನದಿಂದ ಸಂಗೀತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಜನನದಿಂದ ಮರಣದವರೆಗೂ ಸಂಗೀತ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೋಗುಳ, ಮಂತ್ರಗಳು, ಹಬ್ಬಗಳು ಹೀಗೆ ಪ್ರತಿಯೊಂದು ಹಂತದಲ್ಲೂ ಸಂಗೀತವಿದೆ ಎಂದು ಹೇಳಿದರು. ಪ್ರತಿ ವರ್ಷ ನಡೆಯುವ ಈ ಸಂಗೀತೋತ್ಸವವು ನಿಜವಾದ ಹಬ್ಬವಾಗಿದೆ ಎಂದರು.
ಶಾಸಕ ಎಂ. ಆರ್. ಪಾಟೀಲ್ ಮಾತನಾಡಿ, ಒಂದು ತಿಂಗಳ ಪರಿಶ್ರಮದ ನಂತರ ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸುವುದು ಬಹಳ ಕಷ್ಟ. ಒಂದು ಲಗ್ನ ಮಾಡುವುದಕ್ಕಿಂತಲೂ ಕಠಿಣವಾದ ಕೆಲಸ. ವಿಶ್ವಸ್ಥ ಮಂಡಳಿ ತಂಡವಾಗಿ ಕೆಲಸ ಮಾಡುತ್ತಿದ್ದು, ಕುಂದಗೋಳದ ಸಂಗೀತ ಪರಂಪರೆಯನ್ನು ಉಳಿಸುವಲ್ಲಿ ಅವರ ಶ್ರಮ ಶ್ಲಾಘನೀಯವಾಗಿದೆ ಎಂದು ಹೇಳುತ್ತಾ, ಮುಂದೆಯೂ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ, ಕಳೆದ 73 ವರ್ಷಗಳಿಂದ ನಿರಂತರವಾಗಿ ಈ ಮಹೋತ್ಸವ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಸವಾಯಿ ಗಂಧರ್ವರ ಶಿಷ್ಯರಾದ ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಅವರಂತಹ ದಿಗ್ಗಜರು ಕುಂದಗೋಳವನ್ನು ತಮ್ಮ ತವರಮನೆ ಎಂದು ಪರಿಗಣಿಸಿದ್ದರು.

ಈ ವೇಳೆ ಪದ್ಮಶ್ರೀ ಅಶ್ವಿನಿ ಭಿಡೆ ದೇಶಪಾಂಡೆ (ಗಾಯನ), ವಿದುಷಿ ಪದ್ಮನಿ ರಾವ್ (ಗಾಯನ), ಪಂ. ಉಮೇಶ ಚೌಧರಿ (ಗಾಯನ), ಪಂ. ಕೃಷ್ಣೇಂದ್ರ ವಾಡೀಕರ (ಗಾಯನ), ವಿದ್ವಾನ್ ದ್ವಾರಕೀಶ ಎಂ. (ವೀಣಾ ವಾದನ), ಪಂ. ಆನಂದ ಪಾಟೀಲ (ಹಿಂದುಸ್ತಾನಿ ಗಾಯನ) ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ರಾತ್ರಿ ವೇಳೆ, ಪಂ. ರತನ ಮೋಹನ ಶರ್ಮಾ, ದೇವಿ, ಅಭಿಷೇಕ ಜೋಶಿ, ಕುಮಾರ ಸ್ವರ ಶರ್ಮಾ, ರಾಜೇಶ್ವರಿ ಪಾಟೀಲ, ಕುಮಾರ ಪೃಥ್ವಿರಾಜ ಕುಲಕರ್ಣಿ, ಕುಮಾರ ಹೇಮಂತ ಜೋಶಿ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದು, ಎರಡು ರಾತ್ರಿ, ಎರಡು ಹಗಲು ಸಂಗೀತದ ಆರಾಧನೆ ನಡೆಯಲಿದೆ. ಮುಂಬೈ, ಮಧ್ಯಪ್ರದೇಶ, ಗುಜರಾತ್‌ನಿಂದಲೂ ಸಂಗೀತ ಪ್ರೇಮಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಟಿ.ಎಸ್.ಗೌಡಪ್ಪನವರ, ಅರ್ಜುನ ನಾಡಗೀರ, ಮುತ್ತಣ್ಣ ತಡಸೂರ, ಈರಣ್ಣ ನಾಗರಾಳ, ನಾಗರಾಜ ದೇಶಪಾಂಡೆ, ಗಂಗಾಧರಯ್ಯ ನಾವಳ್ಳಿಮಠ, ಅಭಿಷೇಕ್ ಪಾಟೀಲ್, ಬಸವರಾಜ ಬ್ಯಾಹಟ್ಟಿ, ವೀಣಾ ಹಾನಗಲ್ ಸೇರಿದಂತೆ ಅನೇಕ ಗಣ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಂಗೀತೋತ್ಸವ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | 5.20ಲಕ್ಷ ಮೌಲ್ಯದ 65 ಗ್ರಾಂ ಬಂಗಾರ, 50,000 ಸಾವಿರ ನಗದು ಸೇರಿ ಇಬ್ಬರ ಬಂಧನ
ಈ ಸಂದರ್ಭದಲ್ಲಿ, ಪದ್ಮಶ್ರೀ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಿದರು. ಇದೆ ವೇಳೆ ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಸ್ವಾಮಿಗಳು ಮಾತನಾಡಿದರು. ಸಿದ್ದಲಿಂಗೇಶ ಧಾರವಾಡಶಟ್ಟರ ಸ್ವಾಗತಿಸಿದರು, ಡಾ!ಎನ್.ಎಸ್.ಕುಸುಗಲ್ ನಿರೂಪಿಸಿದರು, ಶಂಕರಗೌಡ ದೊಡ್ಡಮನಿ ವಂದಿಸಿದರು.