ಸಂವಿಧಾನ ಮತ್ತು ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ರಾಜ್ಯ ಸರಕಾರ ಜಾತಿ ಜನಗಣತಿ ನಡೆಸುತ್ತಿದೆ. ಸರ್ವೇ ನೆಪದಲ್ಲಿ ಜಾತಿ ಗಣತಿ ಮಾಡಲು ಸಿದ್ದರಾಮಯ್ಯ ಅವರ ಸರಕಾರ ಹೊರಟಿದೆ. ಈ ನಿರ್ಧಾರದ ಹಿಂದೆ ಕುತಂತ್ರ- ಷಡ್ಯಂತ್ರವೂ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ಷೇಪಿಸಿದರು.
ಮಂಗಳವಾರ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿ ಮಾತನಾಡಿದ ಅವರು, “ಕಾಲಂಗಳನ್ನು ಗಮನಿಸಿದರೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಜೈನ, ಸಿಕ್ಖ್, ಬೌದ್ಧ, ಪಾರ್ಸಿ, ನಾಸ್ತಿಕರು, ಇತರೇ ಎಂಬ ವರ್ಗಗಳನ್ನು ಮಾಡಿದ್ದಾರೆ. ಇತರೇ ಎಂಬುದು ಕೂಡ ಕಾನೂನು ಬಾಹಿರ” ಎಂದು ಟೀಕಿಸಿದರು.
“ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಥಿತಿಯನ್ನು ಜಾತಿ ಜನಗಣತಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ. ವೀರಶೈವ ಸಮಾಜವನ್ನು ಒಡೆಯುವ ಕುತಂತ್ರ, ಷಡ್ಯಂತ್ರ ಈ ಜಾತಿ ಜನಗಣತಿ ಹಿಂದಿದೆ. ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದರು” ಎಂದು ಟೀಕಿಸಿದರು.
“ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇ ಮಾಡುವುದಾಗಿ ಹೇಳಿ, ಮತ್ತೊಮ್ಮೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸಮಾಜದ ಗೊಂದಲ ಸರಿಪಡಿಸಬೇಕು; ಸಮಾಜವನ್ನು ಒಗ್ಗೂಡಿಸಬೇಕು, ಸಮಾಜವನ್ನು ಸಮರ್ಪಕ ದಿಕ್ಕಿನಲ್ಲಿ ಒಯ್ಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ತೀರ್ಮಾನ ಮಾಡಲಾಗಿದೆ” ಎಂದರು.
“ಕೆಲವು ಹಿರಿಯರು ವೀರಶೈವ ಮಹಾಸಭಾದ ಪ್ರಮುಖರ ಜೊತೆ ಚರ್ಚೆ ಮಾಡಬೇಕು; ಪಂಚ ಪೀಠಾಧೀಶ್ವರರು, ವಿರಕ್ತ ಮಠದ ಸ್ವಾಮೀಜಿಗಳ ಜೊತೆ ಚರ್ಚಿಸಿ, ಒಳಪಂಗಡ ಮರೆತು ಒಟ್ಟಾಗಿ, ಒಂದಾಗಿ ಸಮಾಜದ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ಮುಂದೆ ಸಾಗಲು ನಿರ್ಧರಿಸಲಾಗಿದೆ” ಎಂದು ವಿವರ ನೀಡಿದರು.
“ಇಂದಿನ ಸಭೆಯ ಒಕ್ಕೊರಲಿನ ತೀರ್ಮಾನದ ಕುರಿತು ಮಠಾಧೀಶರ- ಗಣ್ಯರ ಜೊತೆ ಚರ್ಚಿಸುತ್ತೇವೆ. ಸಮಾಜದ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಲು ತೀರ್ಮಾನ ಮಾಡಿದ್ದೇವೆ” ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರದ ಸಚಿವ ವಿ.ಸೋಮಣ್ಣ, ಪ್ರಮುಖರಾದ ಪ್ರಭಾಕರ ಕೋರೆ, ವಿಜಯ ಸಂಕೇಶ್ವರ, ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಭಾಗವಹಿಸಿದ್ದರು..