ಗೌರಿಬಿದನೂರು ತಾಲೂಕಿನ ಹೊಸೂರು ಬಳಿ ಇರುವ ಡಾ. ಹೆಚ್ ನರಸಿಂಹಯ್ಯ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿ ವಿಜ್ಞಾನದ ಬಗ್ಗೆ ಮಾಹಿತಿ ತಿಳಿದುಕೊಂಡು ವಿಜ್ಞಾನ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಜ್ಞಾನ ಕೇಂದ್ರವು ವಿದ್ಯಾರ್ಥಿಗಳ ಜೊತೆಗೆ ವಿಜ್ಞಾನದ ಕುರಿತು ಆಸಕ್ತಿ ಇರುವ ಕಲಿಯುವ ಪ್ರತಿಯೊಬ್ಬರ ಕುತೂಹಲಕ್ಕೆ ಸಿಕ್ಕಿರುವ ನೆಲೆ.
ಸುಮಾರು ಹತ್ತಾರು ಎಕರೆ ಜಾಗದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣವಾಗಿದ್ದು, ಅಲ್ಲಿನ ಉತ್ತಮ ನಿರ್ವಹಣೆ ಸಾರ್ವಜನಿಕರ ಮೆಚ್ಚುಗೆಗೆ ಮತ್ತೊಂದು ಮುಖ್ಯ ಕಾರಣವಾಗಿದೆ. ಇಲ್ಲಿಗೆ ಕೇವಲ ಚಿಕ್ಕಬಳ್ಳಾಪುರ, ಗೌರಿಬಿದನೂರು ಅಲ್ಲದೆ ಪಕ್ಕದ ತುಮಕೂರು, ಬೆಂಗಳೂರು, ಹಾಸನ, ಕೋಲಾರ ಭಾಗದಿಂದಲೂ ವಿದ್ಯಾರ್ಥಿಗಳು ಬಂದು ವಿಜ್ಞಾನ ವಿಷಯ ಕಲಿಯುತ್ತಾರೆ.


ಕೇಂದ್ರದ ಕುರಿತು ಈದಿನಕ್ಕೆ ಪ್ರತಿಕ್ರಿಯಿಸಿದ ಗೌರಿಬಿದನೂರಿನ ಮಾಜಿ ಶಾಸಕ ಶಿವಶಂಕರರೆಡ್ಡಿ, “ನಮ್ಮ ತಂದೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಆಶಯದಂತೆಯೇ ಇಲ್ಲಿ ಈ ಕೇಂದ್ರ ನಿರ್ಮಾಣ ಮಾಡಲಾಗಿದೆ. ಕೇಂದ್ರಕ್ಕೆ ಅವರ ಹೆಸರೇ ಇಟ್ಟು ಗೌರವ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲವಾಗಲಿ, ಶಿಕ್ಷಣ ಹಾಗೂ ವಿಜ್ಞಾನದ ಬಗ್ಗೆ ಹೆಚ್ಚು ಜ್ಞಾನ ಬರಲಿ ಎಂಬ ಉದ್ದೇಶದಿಂದ ಇದನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಡಾ. ಹೆಚ್ ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್ ನೀಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ತಿಳಿಸಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ವಿಜ್ಞಾನ ಕೇಂದ್ರವನ್ನು ಇನ್ನು ಹೆಚ್ಚು ಅಭಿವೃದ್ಧಿ ಮಾಡುತ್ತೇವೆ” ಎಂದು ತಿಳಿಸಿದರು.
“ನಾನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಿಂದ ಗೌರಿಬಿದನೂರಿನಲ್ಲಿರುವ ಡಾ.ಹೆಚ್ ನರಸಿಂಹಯ್ಯ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ ಹಾಗೂ ಜೊತೆಯಲ್ಲಿ ನನ್ನ ಮಗನಿಗೆ ವಿಜ್ಞಾನದ ಬಗ್ಗೆ ಜ್ಞಾನ ಬರಲಿ ಎಂದು ಕರೆದುಕೊಂಡು ಬಂದಿದ್ದೇನೆ. ಮೊದಲು ವಿಜ್ಞಾನದ ಬಗ್ಗೆ ಜ್ಞಾನ ಹಾಗೂ ಆಸಕ್ತಿ ಕಡಿಮೆ ಇತ್ತು, ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲವನ್ನೂ ನೋಡಿದ ಬಳಿಕ ಜ್ಞಾನ ಹೆಚ್ಚಾಗಿದೆ ಹಾಗೂ ನನ್ನ ಮಗನ ವಿದ್ಯಾಭ್ಯಾಸಕ್ಕೆ ಬಹಳ ಅನುಕೂಲವಾಗಿದೆ. ಗೌರಿಬಿದನೂರು ತಾಲೂಕಿನ ಸುತ್ತ ಮುತ್ತಲಿನ ಜನರಿಗೆ ವಿದ್ಯಾರ್ಥಿಗಳಿಗೆ ವಿಜ್ಞಾನ ಕೇಂದ್ರದಿಂದ ತುಂಬಾ ಅನುಕೂಲ ವಾಗುತ್ತಿದೆ” ಎಂದರು ತುಮಕೂರಿನ ಮಹೇಶ್.



ಹಾಸನದಿಂದ ನಾನು ಕುಟುಂಬ ಸಮೇತ ಬಂದು ಡಾ. ಹೆಚ್ ನರಸಿಂಹಯ್ಯ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಇಲ್ಲಿಗೆ ಭೇಟಿ ನೀಡಿದ ಬಳಿಕ ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಕಷ್ಟು ಅನುಕೂಲವಾಗಿದೆ” ಎಂದು ವಿದ್ಯಾರ್ಥಿ ಸ್ಪಂದನ ಈ ದಿನಕ್ಕೆ ಪ್ರತಿಕ್ರಿಯಿಸಿದರು.
ಸ್ಥಳೀಯ ನಿವಾಸಿ ಗೋವಿಂದರಾಜು ಮಾತನಾಡಿ, “ವಿಜ್ಞಾನ ಕೇಂದ್ರ ನೋಡಲಿಕ್ಕೆ ಬಹಳ ಸುಂದರವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನಾವು ಕೇಂದ್ರ ವಿಜ್ಞಾನದ ಬಗ್ಗೆ ಹೆಚ್ಚು ಜ್ಞಾನ ಪಡೆದುಕೊಂಡಿದ್ದೇವೆ. ವಿಶೇಷವಾಗಿ ಬಾಹ್ಯಾಕಾಶ ಕೇಂದ್ರಗಳ ರೀತಿ ಇಲ್ಲಿಯೂ ಪ್ರದರ್ಶನ ಮಾಡಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಇಲ್ಲಿ ಭೇಟಿ ನೀಡಿ ವಿಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಪಡೆದು ಇಂತಹ ಒಳ್ಳೆಯ ವಿಜ್ಞಾನ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಿ” ಎಂದರು.



ವಿದ್ಯಾರ್ಥಿಗಳಾದ ನೂತನ್ ಹಾಗೂ ವಿನಂತಿ ಮಾತನಾಡಿ, “ವಿಜ್ಞಾನ ಕೇಂದ್ರ ಬಹಳ ಉತ್ತಮವಾಗಿದ್ದು, ಸೈನ್ಸ್ ಬಗ್ಗೆ ನಾವು ಹೆಚ್ಚು ತಿಳಿಯಬಹುದು. ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ವಸ್ತುಗಳು ಇಲ್ಲಿವೆ. ಗ್ರಹಗಳ ಬಗ್ಗೆ ಇಲ್ಲಿ ನಾವು ವಿಶಾಲವಾಗಿ ತಿಳಿಯಬಹುದು. ವಿಜ್ಞಾನ ಹಾಗೂ ಸಮಾಜದ ಬಗ್ಗೆ ಅಧ್ಯಯನ ಮಾಡಲು ವಿಜ್ಞಾನ ಕೇಂದ್ರವು ಬಹಳ ಉಪಯೋಗವಾಗುತ್ತೆ” ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸರ್ಕಾರಿ ನೌಕರರು ತಮ್ಮ ಹುದ್ದೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು: ಷಡಕ್ಷರಿ
ಗೌರಿಬಿದನೂರು ತಾಲೂಕಿನ ಹೊಸೂರು ಬಳಿಯ ಡಾ. ಹೆಚ್ ನರಸಿಂಹಯ್ಯ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ವಿಜ್ಞಾನದ ಕುತೂಹಲವನ್ನು ಪ್ರೇರೇಪಿಸುವ ತಾಣವಾಗಿ ರೂಪುಗೊಂಡಿದೆ. ವಿವಿಧ ಜಿಲ್ಲೆಗಳ ಮಕ್ಕಳು, ಪೋಷಕರು, ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ವಿಜ್ಞಾನವನ್ನು ಕಣ್ಣಾರೆ ನೋಡಿ ಕಲಿಯುತ್ತಿರುವುದು ಈ ಕೇಂದ್ರದ ಮಹತ್ವವನ್ನು ತೋರಿಸುತ್ತದೆ. ಉತ್ತಮ ನಿರ್ವಹಣೆ, ಆಧುನಿಕ ಪ್ರದರ್ಶನಗಳೊಂದಿಗೆ ವಿಜ್ಞಾನವನ್ನು ಜನಸಾಮಾನ್ಯರಿಗೂ ಹತ್ತಿರ ಮಾಡುತ್ತಿರುವ ಈ ಕೇಂದ್ರವು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡರೆ, ಇದು ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಮಾದರಿ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.