ಇಂದು (ಸೆ.16) ಬೆಂಗಳೂರಿನಲ್ಲಿ ನಾವೆದ್ದು ನಿಲ್ಲದಿದ್ದರೆ ಸಂಘಟನೆ ಆಯೋಜಿಸಿದ್ದ ʼಕೊಂದವರು ಯಾರು? ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಂದಿನ ಹೋರಾಟದ ನಡೆಯ ಬಗ್ಗೆ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಪರಾಧಿಗಳನ್ನು ಪತ್ತೆ ಹಚ್ಚುವವರೆಗೂ, ಸಮಾಜದ ತಳಮಟ್ಟದವರೆಗೆ ವಿಸ್ತರಿಸುವ ತೀರ್ಮಾನ ಮಾಡಲಾಗಿದೆ.
ಧರ್ಮಸ್ಥಳದ ಸುತ್ತಮುತ್ತ, ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಾಗಿ, ಗಾಬರಿಗೊಳಿಸುವ ಪ್ರಮಾಣದಲ್ಲಿ ಅಸಹಜ ಸಾವುಗಳು, ನಾಪತ್ತೆ ಪ್ರಕರಣಗಳು ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆದಿವೆ. ಇವು ತನಿಖೆ, ಶಿಕ್ಷೆ ಇತ್ಯಾದಿ ಕಾನೂನು ಪ್ರಕ್ರಿಯೆಯ ದೃಷ್ಟಿಯಿಂದ ತಾರ್ಕಿಕ ಅಂತ್ಯ ಮುಟ್ಟಿಲ್ಲ. ಈ ಪ್ರಕರಣಗಳಲ್ಲಿ ಬಲಿಪಶುಗಳಾಗಿರುವ ಬಹುತೇಕರು ಮಹಿಳೆಯರು ಮತ್ತು ಹಲವರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ಒಂದೇ ಸಣ್ಣ ಪ್ರದೇಶದಲ್ಲಿ, ದೀರ್ಘಕಾಲ, ಮಿಕ್ಕೆಲ್ಲಾ ಕಡೆಗಳಿಗಿಂತ ಹೆಚ್ಚು ನಡೆದೂ ಯಾವ ಪ್ರಕರಣಗಳಲ್ಲೂ ನ್ಯಾಯ ಸಿಗದೇ ಇರುವುದು ಯಾವುದೇ ನಾಗರಿಕ ಸಮಾಜ ಮತ್ತು ನಾಗರಿಕ ಸರ್ಕಾರಗಳನ್ನು ಬೆಚ್ಚಿ ಬೀಳಿಸಬೇಕಿತ್ತು. ಆದರೆ, ಸಮಾಜದ ಕೆಲವರು ಮಾತ್ರ ಈ ನಿಟ್ಟಿನಲ್ಲಿ ಕಾಳಜಿ ತೋರಿಸಿದ್ದು, ಇನ್ನೊಂದು ಭಾಗ ಇದರ ವಿರುದ್ಧವೇ ನಿರಂತರ ಪ್ರಚಾರ ಇತ್ಯಾದಿಗಳನ್ನು ಹಮ್ಮಿಕೊಂಡಿರುವುದು ದುರಂತದ ಇನ್ನೊಂದು ಮಗ್ಗುಲಾಗಿದೆ. ಇಂತಹ ಧ್ರುವೀಕರಣದ ಆಚೆಗೆ, ನಮ್ಮ ಪ್ರಶ್ನೆ ಒಂದೇ. ಹಲವು ಪ್ರಕರಣಗಳಲ್ಲಿ ಕೊಲೆಯಾಗಿರುವುದು ಸಾಬೀತಾಗಿದೆ. ಕೆಲವು ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿರುವುದನ್ನೂ ನ್ಯಾಯಾಲಯ ಗುರುತಿಸಿದೆ. ಸರ್ಕಾರದ ಅಧಿಕೃತ ಸಮಿತಿಯೇ ಮಿಕ್ಕ ಕಡೆಗಳಿಗಿಂತ ಹೆಚ್ಚು ನಾಪತ್ತೆ ಪ್ರಕರಣಗಳನ್ನೂ ದಾಖಲಿಸಿದೆ. ಹೀಗಿರುವಾಗ ಇದಕ್ಕೆ ಕಾರಣಗಳನ್ನು, ಅಪರಾಧಿಗಳನ್ನು ಪತ್ತೆ ಹಚ್ಚುವ ತನಕ ನಾಗರಿಕ ಸಮಾಜ ವಿರಮಿಸಬಾರದು; ಸರ್ಕಾರವೂ ತನಿಖೆಯನ್ನು ನಿಲ್ಲಿಸಬಾರದು; ಬದಲಿಗೆ ಇಂತಹ ಎಲ್ಲಾ ಪ್ರಕರಣಗಳಿಗೆ ವಿಸ್ತರಿಸಬೇಕು. ಯಾರು ಅಪರಾಧಿಗಳು ಅಥವಾ ಯಾರು ಅಪರಾಧಿಗಳಲ್ಲ ಎಂಬುದನ್ನು ಹೇಳಬೇಕಾದ್ದು ಪುರಾವೆಗಳನ್ನು ಮುಂದಿಟ್ಟು ನಡೆಯುವ ತನಿಖೆ ಮತ್ತು ಕಾನೂನು ಪ್ರಕ್ರಿಯೆ. ಅದು ನಿಷ್ಪಕ್ಷಪಾತವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು. ಅದಕ್ಕಾಗಿ ರೂಪಿತವಾಗಿರುವ ಎಸ್ ಐ ಟಿಯ ವ್ಯಾಪ್ತಿ ವಿಸ್ತಾರಗೊಳ್ಳಬೇಕು. ಎಸ್ ಐ ಟಿಯನ್ನು ಪ್ರಭಾವಿಸುವ ಕೆಲಸವನ್ನು ಆಡಳಿತ ಪಕ್ಷವಾಗಲೀ, ವಿರೋಧ ಪಕ್ಷಗಳಾಗಲೀ ಯಾರೂ ಮಾಡಬಾರದು. ಇಂಥವರೇ ಅಪರಾಧಿಗಳು ಎಂಬ ಪೂರ್ವನಿರ್ಧರಿತ ಆರೋಪಗಳನ್ನೂ ಮಾಡಲಾಗದು. ಅದೇ ಸಂದರ್ಭದಲ್ಲಿ ಬಲಿಪಶುಗಳನ್ನು, ಅವರ ಕುಟುಂಬದವರನ್ನು, ಸತ್ಯ ಹೊರಬರಲಿ ಎಂಬ ಪ್ರಯತ್ನದಲ್ಲಿರುವವರ ಮೇಲೆಯೇ ದಾಳಿ ಮತ್ತು ಅವರ ವಿರುದ್ಧದ ಪ್ರಚಾರ ಮಾಡುತ್ತಿರುವುದೂ ಖಂಡನೀಯ. ಅವರ ಪರವಾಗಿ ನಿಲ್ಲುವುದೂ ನಾಗರಿಕ ಸಮಾಜದ ಕರ್ತವ್ಯ.
- ಎಸ್ ಐ ಟಿಯು ಧರ್ಮಸ್ಥಳದ ಸುತ್ತಮುತ್ತ ನಡೆದಿರುವ, ಅತ್ಯಾಚಾರ ನಾಪತ್ತೆ ಮತ್ತು ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳು ಪತ್ತೆಯಾಗದಿರುವ ಎಲ್ಲಾ ಪ್ರಕರಣಗಳನ್ನೂ (ಸೌಜನ್ಯ, ವೇದವಲ್ಲಿ, ಪದ್ಮಲತಾ, ನಾರಾಯಣ ಹಾಗೂ ಯಮುನಾ ಪ್ರಕರಣಗಳು ಸೇರಿದಂತೆ) ಕೈಗೆತ್ತಿಕೊಳ್ಳಬೇಕು ಮತ್ತು ಎಸ್ ಐ ಟಿ ಮೂಳೆ ಹುಡುಕುವ ಏಜೆನ್ಸಿ ಅಲ್ಲ, ಬದಲಿಗೆ ಸಮಗ್ರ ತನಿಖೆಯ ಮೂಲಕ ಸತ್ಯವನ್ನು ಪತ್ತೆ ಹಚ್ಚುವವರೆಗೆ ಕೆಲಸ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ.
- ಇದಕ್ಕಾಗಿ ಲಭ್ಯವಿರುವ ಎಲ್ಲಾ ಅಂಶಗಳ, ಪುರಾವೆಗಳ, ಇದುವರೆಗೆ ನಡೆದಿರುವ ಪ್ರಕ್ರಿಯೆಯ ಸಮಗ್ರ ದಾಖಲೀಕರಣವನ್ನು ನಮ್ಮ ಆಂದೋಲನ ಕೈಗೆತ್ತಿಕೊಳ್ಳಲಿದೆ. ಇದನ್ನು ಆಧರಿಸಿದ ಚಿಕ್ಕ ಕರಪತ್ರ ಜನರಿಗೆ ಮಾಹಿತಿ ನೀಡಲಿಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಇಂತಹ ಪುರಾವೆಗಳು ಕಳೆದುಹೋಗದಿರಲು, ಒಂದು ಕಡೆ ಸಂಗ್ರಹವಾಗಲು ಮತ್ತು ಯಾರು ಏನೇ ಮಾತಾಡಿದರೂ ನಿಜವಾದ ದಾಖಲೆಗಳನ್ನು ಆಧರಿಸಿಯೇ ಮಾತಾಡಲು ಇದರಿಂದ ಅನುಕೂಲವಾಗಲಿದೆ.
- ಬಹುತೇಕ ಮಹಿಳೆಯರೇ ಬಲಿಪಶುಗಳಾಗಿರುವ ಈ ಪ್ರಕರಣಗಳ ಕುರಿತು ಎಲ್ಲಾ ಪಕ್ಷಗಳಿಗೆ ಸೇರಿದ ಮಹಿಳಾ ರಾಜಕಾರಣಿಗಳು ಮತ್ತು ಪಕ್ಷಗಳ ಮುಂದಾಳು ಮಹಿಳೆಯರನ್ನು ಭೇಟಿ ಮಾಡಿ ಅವರುಗಳು ಈ ಕುರಿತು ದನಿಯೆತ್ತಬೇಕು ಎಂಬ ಒತ್ತಾಯವನ್ನು ಮಾಡಲಿದ್ದೇವೆ.
- ಈ ಆಂದೋಲನವು ಸಮಾಜದ ತಳಮಟ್ಟದವರೆಗೆ ವಿಸ್ತಾರವಾಗಬೇಕು. ಜನಾಂದೋಲನ ಆಗಬೇಕು. ಮಹಿಳೆಯರು ಮತ್ತು ವಿದ್ಯಾರ್ಥಿಗಳೂ ಸೇರಿದಂತೆ ಯುವ ಜನರು ನಾಡಿನಲ್ಲಿ ನಡೆಯುವ ಅನ್ಯಾಯದ ವಿರುದ್ಧ ದನಿಯೆತ್ತುವಂತಾಗಲು ಜಾಗೃತಿ ಮೂಡಿಸಲಾಗುತ್ತದೆ.
- ವಿವಿಧ ಜಿಲ್ಲೆಗಳಿಂದ, ಜಿಲ್ಲಾಮಟ್ಟದಲ್ಲಿ ಕೆಲಸ ಮಾಡಬೇಕು ಎಂಬ ಆಗ್ರಹವಿದೆ. ದಾವಣಗೆರೆ, ತುಮಕೂರು, ಮಂಡ್ಯ, ಕಲಬುರ್ಗಿ ಜಿಲ್ಲೆಗಳಿಂದ ವಿವಿಧ ಸಂಘಟನೆಗಳು ಈಗಲೇ ಜವಾಬ್ದಾರಿ ವಹಿಸಲು ಮುಂದೆ ಬಂದಿದ್ದಾರೆ. ಅಲ್ಲಿಂದ ಆರಂಭಿಸಿ ಮುಂದಿನ ಜಿಲ್ಲೆಗಳಿಗೆ ವಿಸ್ತರಿಸಬಹುದು.
- ಸೌಜನ್ಯ ಮೇಲೆ ಅತ್ಯಾಚಾರ ಆಗಿಯೇ ಇಲ್ಲ ಅಂತ ವಾದ ಮತ್ತು ಸೌಜನ್ಯ ತಾಯಿಯನ್ನು ವಿಲನ್ ಮಾಡುವ ಪ್ರಯತ್ನಗಳು ನಾಗರಿಕ ಸಮಾಜವು ತಲೆತಗ್ಗಿಸುವ ರೀತಿಯ ಹುನ್ನಾರದ ಭಾಗವಾಗಿದೆ. ಬಲಿಪಶುಗಳನ್ನು ಗುರಿ ಮಾಡುವುದು, ಅದರಲ್ಲೂ ಮಹಿಳೆಯರ ಮೇಲೆ ಅಂತಹ ದಾಳಿ ಮಾಡುವುದು ಈ ಸಮಾಜದ ಕೆಲವು ಹಿತಾಸಕ್ತಿಗಳು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಅದನ್ನು ಹಿಮ್ಮೆಟ್ಟಿಸಲು ಎಲ್ಲ ಪ್ರಯತ್ನ ಮಾಡಲಾಗುವುದು.
- ಈ ವಿಚಾರದಲ್ಲಿ ಕೆಲಸ ಮಾಡುತ್ತಾ ಬಂದಿರುವ ಜನಪರ ಮಾಧ್ಯಮಗಳ ದನಿಯನ್ನು ಹತ್ತಿಕ್ಕುವ ಪ್ರಯತ್ನವನ್ನೂ ಈ ಆಂದೋಲನ ಖಂಡಿಸುತ್ತದೆ. ಈ ಮಾಧ್ಯಮಗಳ ಜೊತೆಗೂಡಿ ಸತ್ಯ ತಿಳಿಸುವ ಕೆಲಸಕ್ಕೆ ಕೈ ಜೋಡಿಸುತ್ತದೆ. ಸಾಂಸ್ಕೃತಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಈ ದನಿಯನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಯುತ್ತದೆ.
- ಎಸ್ಐಟಿಗೆ ಈ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡವುದು. ಹೆಣ್ಣುಮಕ್ಕಳ ದೃಷ್ಟಿಯಿಂದ ತನಿಖೆಯಲ್ಲಿ ಏನೆಲ್ಲ ವಿಷಯ ಗಮನದಲ್ಲಿಟ್ಟುಕೊಳ್ಳಬೇಕೆಂಬ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು.
ಇದು ಒಂದೆರಡು ದಿನದ ಕಾರ್ಯಕ್ರಮವಾಗದೆ, ನಿರಂತರ ಆಂದೋಲನವಾಗಲಿದೆ.