“ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಪತ್ರಿಕಾ ಹೇಳಿಕೆ ಸರಿಯಲ್ಲ. ಕಾಮಗಾರಿಗಳ ವಿಷಯದಲ್ಲಿ ನಿಯಮಾವಳಿ ಮೀರಿಲ್ಲ. ಕಿರಿಯ ಶಾಸಕನಾಗಿ ಕ್ಷೇತ್ರದ ಯಾವುದೇ ಮಾಜಿ ಶಾಸಕರು, ಹಿರಿಯರು ಸಲಹೆ ಕೊಟ್ಟರೂ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುವೆ” ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಕಾಮಗಾರಿಗಳ ವಿವರಣೆಗಳನ್ನು ಶಾಸಕರಾದ ಶಿವಗಂಗಾ ಬಸವರಾಜ್ ದಾಖಲೆಗಳ ಸಮೇತ ಬಹಿರಂಗಪಡಿಸಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ನಾನು ಶಾಸಕನಾದ ಮೇಲೆ ಕಾಮಗಾರಿಗಳಿಗೆ ನಿಯಮಾವಳಿ ಮೀರಿ ಹೋಗಿರುವುದಿಲ್ಲ. ಹಾಗೇನಾದರೂ ತಪ್ಪಿ ನಡೆದಾಗ ತಿದ್ದುವ ಹಕ್ಕು ಮಾಜಿ ಶಾಸಕರುಗಳಾದ ಹಿರಿಯರಾದ ವಡ್ನಾಳ್ ರಾಜಣ್ಣ, ಮಹಿಮಾ ಪಟೇಲ್, ಮಾಡಾಳ್ ವಿರುಪಾಕ್ಷಪ್ಫನವರಿಗೆ ಇದೆ. ಕಿರಿಯ ವಯಸ್ಸಿನ ಶಾಸಕನಾಗಿ ಕ್ಷೇತ್ರದಲ್ಲಿನ ಯಾವುದೇ ಹಿರಿಯರು ಸಲಹೆ ಕೊಟ್ಟರೂ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.
“ಸಾಸ್ವೆಹಳ್ಳಿ ಏತ ನೀರಾವರಿ ವಡ್ನಾಳ್ ರಾಜಣ್ಣನವರ ಹೋರಾಟದ ಫಲ. ಇನ್ನುಳಿದ ಕಾಮಗಾರಿಗಳಿಗೆ ನಾನು ನಿಯಮಾವಳಿ ಮೀರದೆ ಹೋರಾಟ ಮಾಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇದಲ್ಲದೆ ಚನ್ನಗಿರಿ ತಾಲೂಕಿಗೆ ನೂತನ ಸರ್ಕಾರಿ ಮೆಡಿಕಲ್ ಕಾಲೇಜ್ ತರುವ ಹೋರಾಟ ನಡೆದಿದೆ ಎಂದು ಕ್ಷೇತ್ರದ ಜನರಿಗೆ ತಿಳಿದಿರಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಜಾಪ್ರಭುತ್ವ ದಿನ; ನನ್ನ ಮತ, ನನ್ನ ಹಕ್ಕು ಧ್ಯೇಯ ವಾಕ್ಯದೊಂದಿಗೆ ಸೈಕಲ್ ಜಾಥಾ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಾವಿನಕಟ್ಟೆ ಶ್ರೀಕಾಂತ್, ಹರೋನಹಳ್ಳಿ ವಿಜಯಗೌಡ್ರು, ಕೆರೆಬಿಳಚಿ ಜಬೀವುಲ್ಲಾ, ಸಂತೇಬೆನ್ನೂರು ಬ್ಲಾಕ್ ಆಧ್ಯಕ್ಷರು ಹಾಗು ಪುರಸಭೆ ಸದಸ್ಯರಾದ ಗೌಸ್ ಪೀರ್, ಇಮ್ರಾನ್, ಶಿವಾಜಿರಾವ್, ಜಿತೇಂದ್ರ ರಾಜ್ ಉಪಸ್ಥಿತರಿದ್ದರು.