ಆಂಕರ್‌ಗಳು ಒಂದು ಟಿವಿ ವಾಹಿನಿಯ ಪ್ರತಿನಿಧಿಯಂತೆ ಇದ್ದು ಸಮಾಜದಲ್ಲಿನ ಒಳಿತು ಕೆಡಕುಗಳ ಸುದ್ದಿಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸುವಂತಹ ಕಾರ್ಯವನ್ನು ನಿರ್ವಹಿಸುತ್ತಾರೆ. ಇವರ ಜ್ಞಾನಮಟ್ಟದಿಂದ ಆ ವಾಹಿನಿಯ ಘನತೆ ನಿರ್ಧಾರವಾಗಿರುತ್ತದೆ ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ್ ತಿಳಿಸಿದರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಆಯೋಜಿಸಲಾಗಿದ್ದ 3 ದಿನಗಳ ಆ್ಯಂಕರಿಂಗ್ – ಸುದ್ದಿ ನಿರೂಪಣಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಜನರ ಮತ್ತು ಸರ್ಕಾರದ ನಡುವಿನ ಒಂದು ಸೇತುವೆಯಂತೆ ಕೆಲಸಮಾಡುತ್ತಾರೆ. ಪತ್ರಕರ್ತ ತಾನು ಮಾಡುವ ಕೆಲಸಕ್ಕೆ ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ. ಪತ್ರಕರ್ತ ಯಾವಾಗಲೂ ಸಮಾಜವನ್ನು ಗಮನಿಸುತ್ತಾ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಹ ಕೆಲಸವನ್ನು ಮಾಡಬೇಕು. ಇಂದು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಾಕಷ್ಟು ಪತ್ರಕರ್ತರನ್ನು ಪತ್ರಿಕಾರಂಗಕ್ಕೆ ನೀಡಿದೆ. ಅದರಂತೆ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಪತ್ರಿಕೋಧ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ಅನುಕೂಲವಾಗಲಿ ಎಂದು ಆಂಕರ್ ಸುದ್ದಿ ನಿರೂಪಣಾ ಕಾರ್ಯಗಾರವನ್ನು ಆಯೋಜಿಸಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖಾಸಗೀ ವಾಹಿನಿಯ ಹಿರಿಯ ಸುದ್ದಿ ನಿರೂಪಕರಾದ ಶಾಂಕುಂತಲ ಮಾತನಾಡಿ ಪತ್ರಕರ್ತ ಎಂದರೆ ಸಮಾಜದ ಪ್ರತಿಯೊಂದು ವಿಷಯದ ಬಗ್ಗೆ ವಿಮರ್ಶೆ ಮಾಡುವಂತವರಾಗಿರಬೇಕು, ಪ್ರತಿಕೋಧ್ಯಮ ಎಂದರೆ ಕೇವಲ ಸತ್ಯವನ್ನು ಹುಡುಕುವುದು ಮಾತ್ರವಲ್ಲ ಸಮಾಜದ ಸ್ವಾಸ್ತö್ಯವನ್ನು ಕಾಪಾಡುವಂತಹ ಜವಾಬ್ದಾರಿಯೂ ಕೂಡ ಒಬ್ಬ ನಿಜವಾದ ಪತ್ರಕರ್ತನ ಮೇಲಿರುತ್ತದೆ. ಉತ್ತಮ ಆಂಕರ್ ಅಥವಾ ನಿರೂಪಕರಾಗಬೇಕೆನ್ನುವವರು ಪ್ರಚಲಿತ ವಿದ್ಯಾಮಾನಗಳನ್ನು ಅರಿಯುತ್ತಿರಬೇಕು, ಒಳಿತು ಕೆಡಕುಗಳನ್ನು ತಿಳಿಯುವ ಬುದ್ದಿವಂತಿಕೆ ಇರಬೇಕು, ಭಾಷೆಯಲ್ಲಿ ಹಿಡಿತವಿರಬೇಕು, ನಿರಂತರವಾಗಿ ಅಧ್ಯಯನ ಶೀಲರಾಗಿರಬೇಕು ಇಂತಹ ಅಭ್ಯಾಸಗಳನ್ನು ಹೊಂದಿದ್ದರೆ ಉತ್ತಮ ನಿರೂಪಕನಾಗಬಹುದು, ನಿಮ್ಮಲ್ಲೂ ಒಬ್ಬರು ಉತ್ತಮ ಪತ್ರರ್ಕರಾಗುವ ಅಥವಾ ನಿರೂಪಕರಾಗುವಂತಹ ಗುಣಲಕ್ಷಣಗಳಿದೆ ಆದರೆ ಅದು ಸತತ ಪರಿಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಧಾಯಕ ಮಾತುಗಳನ್ನಾಡಿದರು.
ಖಾಸಗೀ ವಾಹಿನಿಯ ಇನ್ ಪುಟ್ ಕೋಆರ್ಡಿನೇಟರ್ ಆದಂತಹ ಕಾವ್ಯ ಮಾತನಾಡಿ ಒಬ್ಬ ಉತ್ತಮ ಪತ್ರಕರ್ತನಾದವನು ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಲು ಸಾಧ್ಯ ಹಾಗೂ ಅದನ್ನು ಬದಲಾಯಿಸಲೂ ಸಾಧ್ಯ, ಪತ್ರಕರ್ತ ನಿಂತ ನೀರಾಗದೆ ನಿರಂತರ ಅಭ್ಯಾಸದಲ್ಲಿದ್ದಾಗ ಮಾತ್ರ ಅವನು ಪತ್ರಕರ್ತನಾಗಿ ಉಳಿಯುತ್ತಾನೆ ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ, ಪ್ರಚಲಿತ ವಿದ್ಯಮಾನಗಳ ಕುರಿತು ಅರಿವಿರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ ಮುದ್ದೇಶ್, ಖ್ಯಾತ ಕಾದಂಬರಿ ಕಾರರಾದ ಶ್ರೀಮತಿ ಕಮಲಾ ನರಸಿಂಹ, ಹಿರಿಯ ಸುದ್ದಿ ನಿರೂಪಕರಾದ ಎಂ.ಜಿ ಹರಿಪ್ರಸಾದ್ ಹಾಗೂ ಮಾಧ್ಯಮ ಅಧ್ಯಯನ ಕೇಂದ್ರದ ಅಧ್ಯಾಪಕರುಗಳೂ ಮತ್ತು ಸಿಬ್ಬಂದಿವರ್ಗದವರೂ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಗಾರಕ್ಕೆಂದು ಬಂದ ನೂರಾರು ವಿದ್ಯಾರ್ಥಿಗಳು ಭಾಗವಿಸಿದ್ದರು,