ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಿವಪುರದಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುನಾರಂಭ ಮಾಡುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ವಿಜಯಪುರದ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ ಅವರಿಗೆ ಮನವಿ ಸಲ್ಲಿಸಿದರು.
ಶಿವಪುರದಲ್ಲಿ ಕಳೆದ 5 ವರ್ಷಗಳಿಂದ ಶುದ್ಧ ನೀರಿನ ಘಟಕವು ಕೆಟ್ಟು ಹೋಗಿ ಸ್ಥಗಿತಗೊಂಡಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಘಟಕದಲ್ಲಿರುವ ಯಂತ್ರಗಳನ್ನು ದುರಸ್ತಿ ಮಾಡುತ್ತೇವೆ ಎಂದು ತೆಗೆದುಕೊಂಡು ಹೋಗಿ ಇಲ್ಲಿವರೆಗೂ ಏನು ಮಾಡಿಲ್ಲ. ಜೊತೆಗೆ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಕೇರಿಯಲ್ಲಿ ಸಿ.ಸಿ ರಸ್ತೆಗಳು ಆಗದ ಕಾರಣ ಕೊಳಚೆ ನಿರ್ಮಾಣವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರೋಗಗಳು ಹರಡುವ ಸಾಧ್ಯತೆಗಳಿವೆ. ಈ ಸಮಸ್ಯೆ ಕುರಿತು ಪಿಡಿಒ ಅವರಿಗೆ ತಿಳಿಸಿದರೂ ಇಲ್ಲಿವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಪುನರಾರಂಭಿಸಬೇಕು ಹಾಗೂ ಎಸ್ಸಿ ಕಾಲೊನಿಯಲ್ಲಿರುವ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ಆಸ್ಪತ್ರೆ ಎದುರೇ ಹೆರಿಗೆ
ಈ ವೇಳೆ ಅಂಬೇಡ್ಕರ್ ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸ್ಸು ಮಾದರ, ತಾಲೂಕು ಘಟಕದ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಅಲ್ಪಸಂಖ್ಯಾತ ಘಟಕದ ಮೆಹಬೂಬ ಅವಟಿ, ಪೀರಸಾಬ ನದಾಫ, ಯಮನಪ್ಪ ನಾಲ್ನೋಡಿ, ಸಿದ್ದಪ್ಪ ಪ್ಯಾಟಿ, ಬಿ ಬಿ ವಡ್ಡರಿ, ಮಡು ಚಲವಾದಿ, ಎಂ.ವೈ. ಶಿರೋಳ, ಶೇಕಪ್ಪಾ ಮಾದರ, ಅಶೋಕ ಚಲವಾದಿ ಹಾಗೂ ಇತರರು ಇದ್ದರು.