ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಎಷ್ಟು ಮಹತ್ವದಾಗಿದೆಯೋ ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಉತ್ಸವಕ್ಕೂ ಅಷ್ಟೇ ಮಹತ್ವವಿದೆ. ಇದು ನಮ್ಮ ರಾಷ್ಟ್ರೀಯ ಹಬ್ಬವಾಗಿದೆ. ಈ ದಿನವನ್ನು ಆಚರಿಸುವುದು ನಮ್ಮ ಭಾಗದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಲ್ಯಾಣ ಕರ್ನಾಟಕ ವಿಮೋಚನಾ ಅಂಗವಾಗಿ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ʼರಾಜ್ಯದ್ಯಂತ ಎಲ್ಲರೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಆಚರಿಸಿದರೆ, ಕಲ್ಯಾಣ ಕರ್ನಾಟಕದ ನಾವು 2 ಬಾರಿ ಸ್ವಾತಂತ್ರ್ಯದ ಸಂಭ್ರಮ ಆಚರಿಸುತ್ತೇವೆ. ಇಂದು ಕಲ್ಯಾಣ ಕರ್ನಾಟಕ ಹೈದ್ರಾಬಾದ್ ನಿಜಾಮರ ಆಳ್ವಿಕೆ ಮತ್ತು ರಜಾಕಾರರ ದಬ್ಬಾಳಿಕೆಯಿಂದ ವಿಮೋಚನೆಗೊಂಡ ದಿನ. ಈ ವಿಮೋಚನೆಗಾಗಿ ಶ್ರಮಿಸಿದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಮತ್ತು ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಸ್ಮರಿಸುವ ದಿನವಾಗಿದೆ. ಕಲ್ಯಾಣ ಕರ್ನಾಟಕ ಪುರಾಣ, ಇತಿಹಾಸ, ಶರಣ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಶ್ರೀಮಂತ ಪರಂಪರೆ ಹೊಂದಿದೆʼ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳು ಹಿಂದೆ ನಿಜಾಮನ ನೇರ ಆಡಳಿತಕ್ಕೊಳಪಟ್ಟಿದ್ದವು. ಅದರಲ್ಲೂ ಕಲಬುರಗಿ ಇನ್ನೂ ಹೆಚ್ಚು ಹತ್ತಿರವಾಗಿತ್ತು. ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡು ಗಾಂಧಿ, ತಿಲಕರಂತಹ ಅನೇಕ ದೇಶಭಕ್ತರ ಪ್ರೇರಣೆಯಿಂದ ಸಾವಿರಾರು ಜನ ದೇಶಪ್ರೇಮಿಗಳಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅನೇಕರು ತ್ಯಾಗ ಬಲಿದಾನದಿಂದ 1947 ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಕಿಸಿಕೊಟ್ಟರು. ಈ ಎಲ್ಲ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಬೇಕಾಗಿದೆʼ ಎಂದರು.
ʼ1947ರ ಆಗಸ್ಟ್ 15ರಂದು ಇಡೀ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆಯಲಿಲ್ಲ. ನಿಜಾಮರು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪದೆ ಸ್ವತಂತ್ರರಾಗಿ ಉಳಿದರು. ನಮ್ಮ ಭಾಗದಲ್ಲಿ ಸ್ವಾತಂತ್ರ್ಯ ಸಿಕ್ಕರೂ ರಾಷ್ಟ್ರಧ್ವಜ ಹಾರಿಸುವಂತಿರಲಿಲ್ಲ. ವಂದೇ ಮಾತರಂ ಗೀತೆ ಹೇಳುವಂತಿಲ್ಲ. ಯಾರಾದರೂ ರಾಷ್ಟ್ರಧ್ವಜ ಹಿಡಿದರೆ, ವಂದೆ ಮಾತರಂ ಹಾಡಿದರೆ ಜೈಲು ಶಿಕ್ಷೆ ಅನುಭವಿಸುವಂತಾಗುತ್ತಿತ್ತು. ಕನ್ನಡ ಶಾಲೆ ನಡೆಸುವಂತಿರಲಿಲ್ಲ. ಕೊನೆಗೂ ಸೇನಾ ಕಾರ್ಯಾಚರಣೆಯ ಮೂಲಕ ಕಲ್ಯಾಣ ಕರ್ನಾಟಕ 1948 ಸೆಪ್ಟೆಂಬರ್ 17 ರಂದು ವಿಮೋಚನೆಗೊಂಡು, ಭಾರತ ಒಕ್ಕೂಟ ಸೇರಿತು. ಈ ಚಾರಿತ್ರಿಕ ಘಟನೆಗೆ ಸಾಕ್ಷಿಯಾದ ದಿನ ನಮಗೆಲ್ಲರಿಗೂ 2ನೇ ಸ್ವಾತಂತ್ರ್ಯ ದಿನವಾಗಿದೆʼ ಎಂದರು.

ʼಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಮಹನೀಯರಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ದೊಡ್ಡಪ್ಪ ಅಪ್ಪ, ಸ್ವಾಮಿ ರಮಾನಂದ ತೀರ್ಥರು, ಸರ್ದಾರ ಶರಣಗೌಡ ಇನಾಮದಾರರು, ಕೊಲ್ಲೂರು ಮಲ್ಲಪ್ಪನವರು, ಬಸವರಾಜ ಹುಡಗಿ ಅವರು, ರಾಮಚಂದ್ರ ವೀರಪ್ಪ, ಆರ್.ವಿ.ಬಿಡಪ್, ಜಗನ್ನಾಥರಾವ ಚಂಡ್ರಿಕಿ, ವಿದ್ಯಾಧರ ಗುರುಜಿ, ಕಿಶನರಾವ ದೇಶಪಾಂಡೆ ಮಳ್ಳಿ, ದತ್ತಾತ್ರೇಯ ಅವರಾದಿ, ಡಿ.ಬಿ.ಕಲ್ಮಣಕರ್, ಕುಸುಮಾಕರ ದೇಸಾಯಿ, ಗಂಗಾಧರ ನಮೋಶಿ, ಅನ್ನಪೂರ್ಣಯ್ಯ ಸ್ವಾಮಿ ಎಲೇರಿ, ರಾಮಚಂದ್ರ ವೀರಪ್ಪ, ಡಾ.ಭೀಮಣ್ಣ ಖಂಡ್ರೆ ಅವರು, ಬ್ರಿಜಪಾಲಸಿಂಗ್ ಅವರು, ಮಹಾದೇವಪ್ಪ ಡುಮಣಿ ಗೋರ್ಟಾ ಸೇರಿದಂತೆ ಸಾವಿರಾರು ಮಹನೀಯರು ಹೈದ್ರಾಬಾದ ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನೆಗಾಗಿ ಹೋರಾಡಿ ಸೆರೆವಾಸ ಅನುಭವಿಸಿದ್ದರು. ಅವರು ತೋರಿದ ದಾರಿಯಲ್ಲಿ ನಾವು ನಡೆಯೋಣʼ ಎಂದು ಕರೆ ನೀಡಿದರು.
ʼಐತಿಹಾಸಿಕವಾಗಿಯೂ ಅಪಾರ ಪ್ರಾಮುಖ್ಯತೆ ಗಳಿಸಿರುವ ಬೀದರ ಜಿಲ್ಲೆ ಕಲ್ಯಾಣ ಚಾಲುಕ್ಯರು ಹಾಗೂ ಬಹಮನಿ ಸುಲ್ತಾನರ ರಾಜಧಾನಿಯಾಗಿತ್ತು. ಎರಡು ಸಂಸ್ಕೃತಿಗಳ ಸಂಗಮದ ನಾಡಾದ ಬೀದರ ಜಿಲ್ಲೆಯಲ್ಲಿ ಇಂಡೋ ಪರ್ಷಿಯನ್ ಸಂಸ್ಕೃತಿಗಳನ್ನು ಇಂದಿಗೂ ಕಾಣಬಹುದಾಗಿದೆ ಹಾಗೂ ವಿಶ್ವವಿಖ್ಯಾತಿಗಳಿಸಿರುವ ಬಿದ್ರಿ ಕಲೆಯು ಬಹಮನಿ ಸುಲ್ತಾನರ ಕೊಡುಗೆಯಾಗಿದೆ. 371 (ಜೆ) ತಿದ್ದುಪಡಿಯಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶ ನೇಮಕಾತಿಯಲ್ಲಿ ನಮ್ಮ ಭಾಗದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಲಭಿಸುತ್ತಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು 2013ರಲ್ಲಿ ಇದಕ್ಕೆ ನಿಯಮ ರೂಪಿಸಿ ಜಾರಿ ಬಂದಿದೆʼ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡುವಾಗ ಗ್ರೂಪ್ (ಎ) ಮತ್ತು (ಬಿ) ಹುದ್ದೆಯಲ್ಲಿ ಶೇ 75 ರಷ್ಟು, ಗ್ರೂಪ್ (ಸಿ) ಹುದ್ದೆಯಲ್ಲಿ ಶೇ 80ರಷ್ಟು ಮತ್ತು ಗ್ರೂಪ್ ಡಿ ಹುದ್ದೆಯಲ್ಲಿ ಶೇ85 ರಷ್ಟು ಈ ಭಾಗದ ಜನರಿಗೆ ಮೀಸಲಿಡಲಾಗಿದೆ. ಹಾಗೆಯೇ ರಾಜ್ಯದ ಇತರೆ ಭಾಗದ ಜಿಲ್ಲೆಗಳಲ್ಲಿ ನೇಮಕ ಮಾಡುವಾಗ ಶೇ8 ರಷ್ಟು ಈ ಮೀಸಲಾತಿಯನ್ನು ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಶೇ70 ರಷ್ಟು ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶೇ 8 ರಷ್ಟು ಮೀಸಲಾತಿಯನ್ನು ಈ ಭಾಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತಿದೆ. ಇದರಿಂದ ನಮ್ಮ ಭಾಗದ ಯುವಜನರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಲಭಿಸುತ್ತಿದೆʼ ಎಂದು ತಿಳಿಸಿದರು.
ನಾವು ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದ ಜೊತೆಗೆ ನೊಂದವರ ನೋವಿಗೆ ಸಾಂತ್ವನ ಹೇಳುವ ಸಮಯವೂ ಇದಾಗಿದೆ. ಬೀದರ್ ಜಿಲ್ಲೆಯಾದ್ಯಂತ ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ, ಮನೆ ಹಾನಿ, ಮೌಲಸೌಕರ್ಯಕ್ಕೆ ಹಾನಿ ಆಗಿದ್ದು, ₹100 ಕೋಟಿ ವಿಶೇಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು, ಪ್ರಾಥಮಿಕ ಅಂದಾಜಿನಂತೆ ಸುಮಾರು ₹300 ಕೋಟಿ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 79,800 ಹೆಕ್ಟೇರ್ ಕೃಷಿ ಬೆಳೆ ಹಾಗೂ 600 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದೆ. ಮೊದಲೇ ಹಿಂದುಳಿದಿರುವ ಜಿಲ್ಲೆ ಈ ಅನಾಹುತಕಾರಿ ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ರೈತರು, ಬಡಜನರು ಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರವು ನೊಂದ ರೈತರಿಗೆ ಪರಿಹಾರ ನೀಡಲು ಬದ್ಧವಾಗಿದೆʼ ಎಂದರು.

ʼಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಮಾನತೆ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ನೀಡಿದ ಪುಣ್ಯ ಭೂಮಿ ಬೀದರ್. ಬಸವಾದಿ ಶರಣರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಜನಾಂಗದವರಿಗಷ್ಟೇ ಅಲ್ಲದೆ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಿದ್ದರು. ಅನುಭವ ಮಂಟಪ ಜಗತ್ತಿನ ಪ್ರಥಮ ಪ್ರಜಾ ಸಂಸತ್ತಾಗಿತ್ತು. ಈಗ ₹750 ಕೋಟಿ ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಈಗ ಶೇ 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2026ರ ಕೊನೆಯ ವೇಳೆಗೆ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸರ್ಕಾರ ಸಂಕಲ್ಪ ಮಾಡಿದೆʼ ಎಂದು ಹೇಳಿದರು.
ಇದನ್ನೂ ಓದಿ : ಡ್ರೋನ್ ಕ್ಯಾಮೆರಾ ಬಳಸಿ ₹8.12 ಲಕ್ಷ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಬೀದರ್ ಪೊಲೀಸರು
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಬೀದರ ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಮಂಡಳಿಯಿಂದ ₹437.91 ಕೋಟಿಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಕ್ರಿಯಾ ಯೋಜನೆ ಸಿದ್ದಪಡಿಸಲು ಶಾಸಕರಿಂದ ಯೋಜನೆ ರೂಪಿಸಲು ತಿಳಿಸಲಾಗಿದ್ದು ಶೀಘ್ರದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆದು ಜಿಲ್ಲೆಗೆ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುವುದು. ಬೀದರ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರವು ₹48.32 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಮಲನಗರ ತಾಲ್ಲೂಕು ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕಾಗಿ ಕಮಲನಗರ ಗ್ರಾಮದದಲ್ಲಿ 2.20 ಎಕರೆ ಭೂಮಿಯನ್ನು ದಾನ ರೂಪದಲ್ಲಿ ಭೂಮಿಯು ನೀಡಲಾಗಿದ್ದು, ಸದರಿ ಕಟ್ಟಡ ನಿರ್ಮಾಣ ಮಾಡಲು ₹8.60 ಕೋಟಿ ಕರ್ನಾಟಕ ಗ್ರಹ ಮಂಡಳಿಯಿಂದ ಅಂದಾಜು ಪಟ್ಟಿ ಹಾಗೂ ನಕಾಶೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆʼ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲರ ಭಾವಚಿತ್ರದ ಮೆರವಣಿಗೆ ಬಸವೇಶ್ವರ ವೃತ್ತದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಬೀದರ ಸಂಸದ ಸಾಗರ್ ಖಂಡ್ರೆ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹ್ಮದ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.