ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿ ಉಮೇಶ್ ಕತ್ತಿ ಮತ್ತು ಸತೀಶ್ ಜಾರಕಿಹೊಳಿ ಬೆಂಬಲಿತ ಸದಸ್ಯರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಚುನಾವಣೆ ವೇಳೆ ಮತದಾನ ಮಾಡಬೇಕಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಕಾವಲಿಗಾಗಿ ಕೆಲವು ಪುಂಡರು ಹುಕ್ಕೇರಿಯಲ್ಲಿ ರಾಜಾರೋಷವಾಗಿಯೇ ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿರುವವರು ಕತ್ತಿ ಬೆಂಬಲಿಗರು ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿ; ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಸುಗರ್ಸ್ ಕಟ್ಟಡದ ಸುತ್ತಮುತ್ತ ಪುಂಡರು ಲಾಂಗು, ಮಚ್ಚು ಹಿಡಿದು ಓಡಾಡುವ ದೃಶ್ಯಗಳು ಕಂಡುಬಂದಿವೆ. ಸಾರ್ವಜನಿಕವಾಗಿ ಪುಂಡರು ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವುದು ಜನರಲ್ಲಿ ಭೀತಿ ಹುಟ್ಟುಹಾಕಿದೆ. ಮಾತ್ರವಲ್ಲದೆ, ಜನಾಕ್ರೋಶಕ್ಕೂ ಕಾರಣವಾಗಿದೆ.
ಕತ್ತಿ ಬೆಂಬಲಿತ ಸದಸ್ಯರನ್ನು ವಿರೋಧಿ ಬಣವು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಾರದು ಅಥವಾ ಅಪಹರಿಸಬಾರದೆಂದು ಸದಸ್ಯರನ್ನು ಕಾವಲು ಕಾಯಲಾಗುತ್ತಿದೆ ಎಂದು ಹೇಳಲಾಗಿದೆ. ಸದಸ್ಯರನ್ನು ಕಾವಲು ಕಾಯಲು ಪುಂಡರು ಮಾರಕಾಸ್ತ್ರಗಳನ್ನು ಹಿಡಿದು, ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.