ಇತ್ತೀಚಿಗೆ ಮದ್ದೂರಿನಲ್ಲಿ ಸಂಭವಿಸಿದ ಗಲಭೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸೌಹಾರ್ದತೆ, ಸಾಮರಸ್ಯ ಬೆಳೆಸಲು ಪರಸ್ಪರ ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಉತ್ತೇಜಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಸೌಹಾರ್ದ- ಸಾಮರಸ್ಯ ನಡಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ಮಂಡ್ಯ ಜಿಲ್ಲಾ ಜನಪರ ಸಂಘಟನೆಗಳು ಮನವಿ ಮಾಡಿವೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆಗಳ ಮುಖಂಡರು, “ಜನಪರ ಸಂಘಟನೆಗಳ ಮುಂದಾಳತ್ವದಲ್ಲಿ ಸೆ.22ರ ಸೋಮವಾರದಂದು ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿನ ಬುದ್ಧಿಜೀವಿಗಳು, ಬರಹಗಾರರು ಮತ್ತು ಹೋರಾಟಗಾರರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಟಿ ಬಿ ವೃತ್ತದಲ್ಲಿರುವ ರೈತ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ಪ್ರತಿಮೆಯ ಬಳಿಯಿಂದ ಆರಂಭಗೊಳ್ಳುವ ನಡಿಗೆ ಮದ್ದೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹದ ಬಳಿ ಸಮಾವೇಶಗೊಳ್ಳಲಿದೆ”
“ವಿಸ್ತಾರವಾಗುತ್ತ ಹೋಗುವುದು ಜೀವನ, ಸಂಕುಚಿತಗೊಳ್ಳುತ್ತ ಸಾಗುವುದು ಸಾವು; ಪ್ರೀತಿಯೇ ಜೀವನ, ದ್ವೇಷವೇ ಸಾವು ಎಂದರು ಮಹಾನ್ ಸಂತ ವಿವೇಕಾನಂದರು, ಆದರೆ ಈಗ ಆಗುತ್ತಿರುವುದೇನು? ಮತೀಯ ಶಕ್ತಿಗಳು ತಾವೂ ಸಂಕುಚಿತಗೊಳ್ಳುತ್ತ ಜನರನ್ನೂ ಸಂಕುಚಿತಗೊಳಿಸುತ್ತಾ ಸಮೂಹ ನಾಶದೆಡೆಗೆ ಮನುಕುಲವನ್ನು ಕೊಂಡೊಯ್ಯುತ್ತಿದ್ದಾರೆ. ಎಲ್ಲಾ ಧರ್ಮದ, ಜಾತಿಯ ಜನ ಸೇರಿ ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ತ್ರಿವರ್ಣ ಧ್ವಜ ಹಾರಿಸಿ ಐಕ್ಯತೆ ಮೆರೆದು ವಸಾಹತು ಶಾಹಿಗಳ ದಬ್ಬಾಳಿಕೆ ಮತ್ತು ಕುತಂತ್ರಗಳನ್ನು ಸೋಲಿಸಿದ ಮದ್ದೂರಿನಲ್ಲಿ ಈಗ ಏನಾಗಿದೆ? ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ತೂರಿದ ಕಲ್ಲೊಂದು ಕಿಡಿಯಾಗಿ, ಕಾಡ್ಗಿಚ್ಚಾಗಿ ಮನೆ, ಮನೆಗಳನ್ನು ಸುಡುತ್ತಿದೆ. ಜೊತೆಗೆ ಉಟ್ಟ, ಉಂಡ, ಆಟವಾಡಿ ಬದುಕಿದ ಜೀವಗಳು ಪರಸ್ಪರ ಅನುಮಾನದಿಂದ ನೋಡುವ, ದ್ವೇಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳನ್ನು ಕ್ರಿಮಿನಲ್‌ಗಳಾಗಿ ನೋಡುವ ಬದಲು ಅವರನ್ನು ಒಂದು ಧರ್ಮದ ವಾರಸುದಾರರನ್ನಾಗಿ ಮಾಡುವ ಮೂಲಕ ಒಂದಿಡೀ ಧರ್ಮದ ಜನರನ್ನೇ ಕ್ರಿಮಿನಲ್‌ಗಳಾಗಿ ಬಿಂಬಿಸುವ ಕ್ಷುಲ್ಲಕ ರಾಜಕಾರಣ ನಡೆಯುತ್ತಿದೆ”
“ಆದರೆ, ಮದ್ದೂರಿನ ಮಣ್ಣು ಅಷ್ಟು ಸುಲಭಕ್ಕೆ ಇಂತಹುದಕ್ಕೆ ಬಲಿಯಾಗುವುದಿಲ್ಲ. ಬಲಿಯಾಗಲು ಬಿಡಲೂ ಬಾರದು. ಶೂದ್ರ ಒಕ್ಕಲಿಗರ ಹೊಟ್ಟೆಯಲ್ಲಿ ಹುಟ್ಟಿದರೂ ವಿಶ್ವಮಾನವನಾದ ಕುವೆಂಪು ನಮಗೆ ಆದರ್ಶವಾಗಿದ್ದಾರೆ. ಹಿಂದೂ ಧರ್ಮದ ಮಹಾನ್ ಚೇತನ ವಿವೇಕಾನಂದರ ಆದರ್ಶಗಳು ನಮ್ಮ ಮುಂದಿವೆ. ಕಂದಾಚಾರಗಳನ್ನು ಕಿತ್ತೆಸೆದ ಬಸವಣ್ಣ, ಕುಲದ ನೆಲೆಯನ್ನೇ ಪ್ರಶ್ನಿಸಿದ ಕನಕದಾಸ ನಮ್ಮ ಮುಂದಿನ ಕಂದೀಲುಗಳಾಗಿದ್ದಾರೆ. ಆದರೆ ಮತೀಯ ಶಕ್ತಿಗಳು ಕಂದೀಲು ಬೆಳಕನ್ನು ನುಂಗಿ ನೊಣೆದು ಕತ್ತಲ ಲೋಕವನ್ನು ಸೃಷ್ಟಿಸಲು ಪಣತೊಟ್ಟು ನಿಂತಿದ್ದಾರೆ”
ಇದನ್ನೂ ಓದಿ: ಮಂಡ್ಯ | ಮುಯ್ಯಾಳು ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದ ಕನ್ನಡದ ಮನಸ್ಸುಗಳು
“ಆದ್ದರಿಂದ, ನಾಗರಿಕರಾದ ನಮ್ಮ ಜವಾಬ್ದಾರಿ ಅಪಾರವಾಗಿದೆ. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವ ಕ್ರಿಮಿನಲ್‌ಗಳನ್ನು ಕ್ರಿಮಿನಲ್‌ಗಳಾಗಿಯೇ ನೋಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ನೀಡಿರುವ ಕಾನೂನಿನ ವ್ಯಾಪ್ತಿಯಲ್ಲಿ ಕ್ರಿಮಿನಲ್‌ಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕ್ರಿಮಿನಲ್‌ಗಳನ್ನು ಒಂದು ಧರ್ಮಕ್ಕೆ ಆರೋಪಿಸುವುದು ಕ್ರಿಮಿನಲ್‌ಗಳನ್ನು ರಕ್ಷಿಸುವ ಉದ್ದೇಶವೇ ಆಗಿದೆ. ಆದ್ದರಿಂದ ಇಂತಹ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ
ಇರಬೇಕಾಗಿದೆ”
“ಮದ್ದೂರಿನ ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯವನ್ನು ಉಳಿಸಿಕೊಳ್ಳಲು, ವಿವೇಕಾನಂದರು ಹೇಳಿದಂತೆ ಪ್ರೀತಿಯೇ ಜೀವನ, ದ್ವೇಷವೇ ಸಾವು ಎಂಬುದನ್ನು ಮನಗಾಣಿಸಲು, ಆ ಮೂಲಕ ಇಡೀ ನಾಡಿಗೆ ಪ್ರೀತಿ ಹಂಚಲು ಈ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದ್ದರಿಂದ ನಾಗರೀಕರು, ಸಂಘ ಸಂಸ್ಥೆಗಳು, ವಿದ್ಯಾರ್ಥಿ ಯುವಜನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.
ಈ ಜಾಗೃತ ನಡಿಗೆಗೆ ಮಾಜಿ ಪುರಸಭಾ ಅಧ್ಯಕ್ಷ ಎಂ. ಸಿ. ಬಸವರಾಜು, KPRSನ ರೈತ ಮುಖಂಡ ಎಸ್. ವಿಶ್ವನಾಥ್, DSS ನಾಯಕ ಶಿವರಾಜ್ ಮರಳಿಗೆ, ರೈತ ಮುಖಂಡ ಶಂಕರೇಗೌಡ ಬೋರಾಪು ಹಾಗೂ ಜಾಗೃತ ಕರ್ನಾಟಕದ ಜಗದೀಶ್ ನಗರಕೆರೆ ಬೆಂಬಲ ಸೂಚಿಸಿದ್ದಾರೆ.