ಧರ್ಮಸ್ಥಳ ಗ್ರಾಮಕ್ಕೆ ಅಂಟಿಕೊಂಡ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ಮತ್ತಷ್ಟು ಜೀವ ಬಂದಿದೆ.
ಎಸ್‌ಐಟಿಯಿಂದ ಬುಧವಾರ ನಡೆದ ಬಂಗ್ಲೆಗುಡ್ಡೆ ಕಾಡಿನೊಳಗಿನ ಸ್ಥಳ ಮಹಜರು ವೇಳೆ ಒಂಬತ್ತು ಕಡೆ ಮಾನವನ ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಾಕ್ಷಿ ದೂರುದಾರ ಗುರುತಿಸಿದ ಸ್ಥಳದ 11ನೇ ಪಾಯಿಂಟ್ ಬಳಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಸ್ಥಿಪಂಜರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಈ ಹಿಂದೆ ಸಾಕ್ಷಿದಾರ ವಿಠಲಗೌಡರನ್ನು ಎಸ್ಐಟಿ ಅಧಿಕಾರಿಗಳು ಕರೆದುಕೊಂಡು ಬಂದು ಎರಡು ಸಲಾ ಇದೇ ಜಾಗದ ಬಳಿ ಸ್ಥಳ ಮಹಜರು ನಡೆಸಿದ್ದರು. ಆ ಸಂದರ್ಭದಲ್ಲಿ ವಿಠಲಗೌಡರು ಅಧಿಕಾರಿಗಳಿಗೆ ಅಸ್ಥಿಪಂಜರ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎರಡನೇ ಹಂತದಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆಗಳು, ಮೂರ್ನಾಲ್ಕು ತಲೆಬುರುಡೆಯನ್ನು ಸ್ಥಳ ಮಹಜರು ವೇಳೆ ನೋಡಿದ್ದೆ ಎಂದು ವಿಡಿಯೋ ಮಾಡಿ ವಿಠಲಗೌಡ ಹರಿಬಿಟ್ಟಿದ್ದರು. ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ನೋಡಿದ್ದಾಗಿಯೂ ಹೇಳಿರುವುದರಿಂದ ಬಂಗ್ಲೆಗುಡ್ಡೆ ಸ್ಥಳ ಮಹಜರು ಮಾಡಲು ಎಸ್ಐಟಿ ತಂಡ ಆಗಮಿಸಿದೆ.
ಎಸ್ಐಟಿ ತಂಡದೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯತಿ, soco ತಂಡ, ತಂಡದ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ ಸೈಮನ್ ನೇತೃತ್ವದಲ್ಲಿ ಮೂಳೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಂಡದಲ್ಲಿ 40 ಜನರಿದ್ದಾರೆ.