“ಕಳೆದ ಮೂರು ದಿನಗಳಿಂದ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿ ನಡೆದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿಗಾಗಿ ಒತ್ತಾಯಿಸಿ ನಡೆದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಲಿಖಿತ ಭರವಸೆ ನೀಡಿದ ಬಳಿಕ ಸಾಂಕೇತಿಕವಾಗಿ ಮೊಟುಕುಗೊಳಿಸಲಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಸೀಲ್ದಾರ ಕಛೇರಿ ಆವರಣದಲ್ಲಿ ಬಗರ್ ಹುಕುಂ ಸಾಗುವಳಿದಾರರು ಹಕ್ಕು ಪತ್ರ ನೀಡುವಂತೆ ಅನಿರ್ದಿಷ್ಟವಾಧಿ ಧರಣಿ ಸ್ಥಳಕ್ಕೆ ಬಗರ್ ಹುಕುಂ ಸಮಿತಿ ಕಾರ್ಯದರ್ಶಿ ಆಗಿರುವ ತಹಶಿಲ್ದಾರ ಕಿರಣಕುಮಾರ ಕುಲಕರ್ಣಿ ಅವರು, “ಬಗರ್ ಹುಕುಂ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಹೋರಾಟಗಾರರ ಸಮಕ್ಷಮದಲ್ಲಿ ಚರ್ಚೆ ನಡೆಸಿ, ಅಕ್ಟೊಬರ್ ಮೊದಲ ವಾರದಲ್ಲಿ ಸಭೆ ಕರೆಯಲಾಗುವುದು. ಅರ್ಜಿಗಳನ್ನು ಪರಿಶೀಲಿಸಿ, ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವ ಕುರಿತು ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗುತ್ತೇವೆ. ಆ ಸಭೆಗೆ ಎಸಿ ಅವರನ್ನು ಕೂಡಾ ಬರಲು ತಿಳಿಸುತ್ತೇವೆ” ಎಂದು ಲಿಖಿತ ಭರವಸೆ ನೀಡಿದರು.
ತಾಲೂಕು ಕಾರ್ಯದರ್ಶಿ ಎಂ.ಎಸ್.ಹಡಪದ ಮಾತನಾಡಿ, “ಲಿಖಿತ ಭರವಸೆ ನೀಡಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ ಮೂಗಿಗೆ ತುಪ್ಪ ಹಚ್ಚುವ ಬದಲಾಗಿ ಕಾಲಾವಕಾಶ ತೆಗೆದುಕೊಂಡಿರುವ ತಾಲೂಕಾಡಳಿತ ಸಾಗುವಳಿ ಮಾಡುವ ಬಗ್ಗೆ ಸ್ಥಳ ಪರಿಶೀಲನೆ, ಅರ್ಜಿ ಪರಿಶೀಲನೆ ಕಾರ್ಯಗಳನ್ನು ಮಾಡಬೇಕು. ಜೊತೆಗೆ ಸೆಪ್ಟೆಂಬರ್ 30 ರಂದು ಸಭೆ ಕರೆಯುವ ಬಗ್ಗೆ ನೋಟಿಸ್ ನೀಡಬೇಕು. ಇಲ್ಲವಾದ್ರೆ ಅಕ್ಟೋಬರ್ ೨ ರಂದು ಪುನಃ ಧರಣಿ ಸತ್ಯಾಗ್ರಹ ಯಾಥಾಸ್ಥಿತಿ ಮುಂದುವರೆಯಲಿದೆ. ಹೋರಾಟದ ಸ್ವರೂಪ ತೀವ್ರವಾಗಿರಲಿದೆ” ಎಂದು ಎಚ್ಚರಿಸಿದರು.
ಹೋರಾಟವನ್ನು ಬೆಂಬಲಿಸಿ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ್, ಡಿವಾಯ್ಎಫ್ಐ ಮುಖಂಡ ದಾವಲಸಾಬ ತಾಳಿಕೋಟಿ, ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷ ಶಾಮಿದಲಿ ದಿಂಡವಾಡ ಮಾತನಾಡಿದರು.
ಮೂರು ದಿನಗಳಿಂದ ಹೋರಾಟ ನಡೆಸಿದ ರೈತರಿಗೆ ಹಾಗೂ ಮುಖಂಡರಿಗೆ ಬೀದಿ ಬದಿ ವ್ಯಾಪಾರಸ್ಥರು ಹೂ, ಹಣ್ಣು ವಿತರಿಸಿ ಕೆ.ಕೆ.ವೃತ್ತದಲ್ಲಿ ಗೌರವಿಸಿದರು.
ಧರಣಿ ಸತ್ಯಾಗ್ರಹದಲ್ಲಿ ರೈತ ಸಂಘದ ಅಧ್ಯಕ್ಷ ರೂಪೇಶ ಮಾಳೋತ್ತರ ,ಚೆನ್ನಪ್ಪ ಗುಗಲೋತ್ತರ, ಬಾಲು ರಾಠೋಡ, ಪೀರು, ರಾಠೋಡ, , ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಗಣೇಶ, ರಾಠೋಡ, ಆನಂದ ರಾಠೋಡ, ಸೇರಿದಂತೆ ನೂರಾರು ರೈತರು, ಬೀದಿ ಬದಿ ವ್ಯಾಪಾರಸ್ಥರು, ಪಾಲ್ಗೊಂಡಿದ್ದರು.