“ಪ್ರತಿಯೊಂದು ಜೀವಿ ಜೀವಿಸಲು ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ‘ಪರಿಸರ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ’ ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಮೂಡಬೇಕಿದೆ” ಎಂದು ಪರಿಸರ ಸಂರಕ್ಷಣಾ ಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಲೊಯೋಲ ವಿಕಾಸ ಕೇಂದ್ರ ಸಂಸ್ಥೆಯ ಸಹನಿರ್ದೇಶಕರು ಫಾದರ್ ಜೇಸನ್ ಪಾಯ್ಸ್ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಹಾನಗಲ್ಲ, ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಮಂಗಳೂರು, ಗ್ರಾಮಪಂಚಾಯತ್ ಪ್ರಾಥಮಿಕ ಆರೋಗ್ಯ ಕೇಂದ್ರ, ಯುನಾನಿ ಚಿಕಿತ್ಸಾಲಯ ಹಾಗೂ ಕೊಪ್ಪರಸಿಕೊಪ್ಪ ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಜಾಥಾ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
“ನಾವು ಜೀವಿಸುತ್ತಿರುವ ಈ ಭೂಮಿಯು ಪ್ರಕೃತಿಯ ಅಮೂಲ್ಯ ಕೊಡುಗೆ. ವನಗಳು ನದಿಗಳು, ಪಶುಪಕ್ಷಿಗಳು, ಗಾಳಿ, ನೀರು, ಮಣ್ಣು ಇವೆಲ್ಲವೂ ನಮ್ಮ ಬದುಕಿಗೆ ಅವಿಭಾಜ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಸುಖಕ್ಕಾಗಿ ಪ್ರಕೃತಿಯನ್ನು ದುರಪಯೋಗ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ಮರ ಕಡಿಯುವುದು, ನದಿಗಳನ್ನು ಮಲೀನಗೊಳಿಸುವುದು, ಪ್ಲಾಸ್ಟಿಕ್ ಉಪಯೋಗ ಹೆಚ್ಚಿಸುವುದು ಇವೆಲ್ಲವೂ ಪರಿಸರವನ್ನು ನಾಶಗೊಳಿಸುತ್ತವೆ” ಎಂದರು.
ಕೊಪ್ಪರಸಿಕೊಪ್ಪ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ರಮೇಶ ತಾಂಬ್ಡೆಕರ್ ಮಾತನಾಡಿ, “ಜಲ ಮಣ್ಣು ವನ್ಯ ಜೀವಿ ಇವುಗಳನ್ನು ಕಾಪಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ತಲೆಮಾರಿಗೆ ಪರಿಸರದ ಸಂರಕ್ಷಣೆ ನಾವು ಕೊಡುವ ಕೊಡುಗೆ ಆಗಿದೆ. ಪರಿಸರ ಸ್ವಚ್ಛವಾಗಿಟ್ಟಲ್ಲಿ ಉತ್ತಮ ಆರೋಗ್ಯ ಮತ್ತು ಉತ್ತಮ ಭವಿಷ್ಯ ಹೊಂದಲು ಸಾಧ್ಯ” ಎಂದು ತಿಳಿಸಿದರು.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಊರಿನ ಪ್ರಮುಖ ಬಿದಿಗಳಲ್ಲಿ, ಪರಿಸರ ಜಾಗೃತಿ ಹಾಗೂ ಸ್ವಚ್ಛತೆಯನ್ನು ಕುರಿತು ಘೊಷಣಾ ಫಲಕಗಳೊಂದಿಗೆ ಜಾಥಾ ಹೊರಟು, ಶಿವಾಜಿ ಸರ್ಕಲ್‌ನಲ್ಲಿ ಪರಿಸರದ ಜಾಗೃತಿ ಬೀದಿ ನಾಟಕ ಪ್ರದರ್ಶನ ಮಾಡಿದರು.
ನಂತರ ಬೀದಿಗಳಲ್ಲಿ ಪ್ಲಾಸ್ಟಿಕ್ ಆರಿಸಿ ಕಸದ ಗಾಡಿಗೆ ಹಾಕುವ ಮೂಲಕ ಹಾಗೂ ಅಂಗಡಿಗಳ ಮುಂಭಾಗದಲ್ಲಿ ಕಸದ ತೊಟ್ಟಿ ಇಡಲು ಜನರನ್ನು ಜಾಗೃತಗೊಳಿಸಿದರು.
ಕಾರ್ಯಕ್ರಮದಲ್ಲಿ ವೈಧ್ಯಾಧಿಕಾರಿ ಯುನಾನಿ ಚಿಕಿತ್ಸಾಲಯ ಮೈನುದ್ದೀನ ಲೋಹಾರ, ಕೊಪ್ಪರಸಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಕಿರ್ತಿ ಹುನಗುಂದ, ಆಶಾಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸಿಬ್ಬಂದಿವರ್ಗ, ಮಹಿಳಾ ಸ್ವ-ಸಹಾಯ ಸಂಘದವರು, ಜನವೇದಿಕೆ ನಾಯಕರು ಪಂಚಾಯತ್ ಸಿಬ್ಬಂದಿವರ್ಗ, ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪೀರಪ್ಪ ಶಿರ್ಶಿ ಸ್ವಾಗತಿಸಿದರು. ಹೊನ್ನಮ್ಮ ವೈ. ಎಸ್. ನಿರೂಪಿಸಿದರು. ಮೈಲಾರಿ ಸಂವಿಧಾನದ ಪ್ರಸ್ತಾವನೆೆಯನ್ನು ಮಾಡಿದರು. ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.