ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಅರಣ್ಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಅಸ್ಥಿಪಂಜರಗಳ ಅವಶೇಷಗಳನ್ನು ವಶಪಡಿಸಿಕೊಂಡಿದೆ.
ಬಂಗ್ಲೆಗುಡ್ಡೆ ಅರಣ್ಯದಲ್ಲಿನ ಶೋಧದ ವೇಳೆ 5 ತಲೆಬುರುಡೆಗಳು ಮತ್ತು 100 ಮೂಳೆಗಳು ಸಿಕ್ಕಿರುವುದಾಗಿ ಎಸ್‌ಐಟಿ ಮೂಲಗಳು ಖಚಿತ ಪಡಿಸಿದ್ದು, ಧರ್ಮಸ್ಥಳ ಗ್ರಾಮಕ್ಕೆ ಅಂಟಿಕೊಂಡ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ಹೊಸ ಸ್ವರೂಪ ಸಿಕ್ಕಂತಾಗಿದೆ.
ಧರ್ಮಸ್ಥಳ ಪ್ರಕರಣ ಇನ್ನೇನು ಮುಗಿದೋಯ್ತು ಎನ್ನುವಾಗಲೇ ಹೊಸ ಅಧ್ಯಾಯ ಆರಂಭವಾಗಿದೆ. ಮೊದಲ ಶೋಧ ಕಾರ್ಯದಲ್ಲಿ ಗುರುತಿಸಿದ ಸ್ಥಳಗಳಲ್ಲಿ 17 ಗುಂಡಿ ತೋಡಿದರೂ ಮೃತ ಶವಗಳ ಅವಶೇಷಗಳು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿರಲಿಲ್ಲ. ಆದರೆ, ಈಗ ಎರಡನೇ ಹಂತದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಮೊದಲ ದಿನವೇ ಮಾನವನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.
2012ರ ಅಕ್ಟೋಬರ್ 9 ರಂದು ಧರ್ಮಸ್ಥಳದಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿತ್ತು ಎಂದು ಎನ್ನುವ ಗಂಭೀರ ಆರೋಪ ಧರ್ಮಸ್ಥಳದಿಂದ ದೂರವಾಗಿಲ್ಲ. ಎಸ್‌ಐಟಿ ಶೋಧದ ನಡುವೆ ಮೃತ ಸೌಜನ್ಯ ಅವರ ಮಾವ ವಿಠ್ಠಲ್ ಗೌಡ ಅವರು ಈ ಹಿಂದೆ ಹೇಳಿಕೆ ನೀಡಿದ್ದನ್ನು ಅನುಸರಿಸಿ ಎಸ್ಐಟಿ ಶೋಧ ನಡೆಸುತ್ತಿದೆ.
“ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆಗಳು, ಮೂರ್ನಾಲ್ಕು ತಲೆಬುರುಡೆಯನ್ನು ಸ್ಥಳ ಮಹಜರು ವೇಳೆ ನೋಡಿದ್ದೆ” ಎಂದು ವಿಡಿಯೋ ಮಾಡಿ ವಿಠಲ್ ಗೌಡ ಹರಿಬಿಟ್ಟಿದ್ದರು. ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ನೋಡಿದ್ದಾಗಿಯೂ ಹೇಳಿರುವುದರಿಂದ ಬುಧವಾರ (ಸೆ.17) ಮತ್ತೆ ಬಂಗ್ಲೆಗುಡ್ಡೆ ಸ್ಥಳ ಮಹಜರು ಮಾಡಲು ಎಸ್ಐಟಿ ತಂಡ ಆಗಮಿಸಿದೆ.