ಉತ್ತರಾಖಂಡದಲ್ಲಿ ಮೇಘಸ್ಫೋಟ ಮುಂದುವರಿದ್ದು, ಚಮೋಲಿ ಜಿಲ್ಲೆಯ ನಂದನಗರದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಮೇಘಸ್ಫೋಟದಿಂದ ಭೂಕುಸಿತ ಉಂಟಾಗಿ ಮನೆಗಳು ಕುಸಿದಿದ್ದು, ಕನಿಷ್ಠ ಏಳು ಜನರು ಕಾಣೆಯಾಗಿದ್ದಾರೆ.
ನಗರ ಪಂಚಾಯತ್ ನಂದನಗರದ ಕುಂತ್ರಿ ವಾರ್ಡ್‌ನಲ್ಲಿ ಭೂಕುಸಿತವಾಗಿ ಆರು ಮನೆಗಳು ನಾಶಪಡಿಸಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಭೂಕುಸಿತ ಸಂಭವಿಸಿದ ಸಮಯದಲ್ಲಿ ಏಳು ಮಂದಿ ಮನೆಯ ಒಳಗೆ ಇದ್ದರು, ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ, ಇನ್ನೂ ಐವರು ನಾಪತ್ತೆಯಾಗಿದ್ದಾರೆ.
ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು, ವೈದ್ಯಕೀಯ ತಂಡ ಮತ್ತು ಮೂರು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಮೋಖ್ ನದಿಯಲ್ಲಿನ ಪ್ರವಾಹವು ನಂದನಗರ ಪ್ರದೇಶದ ಧುರ್ಮಾ ಗ್ರಾಮದಲ್ಲಿ ಆರು ಮನೆಗಳನ್ನು ನಾಶಪಡಿಸಿದೆ.
ಉತ್ತರಾಖಂಡದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ, ಈವರೆಗೂ ಬುಧವಾರದ ವರದಿ ಆಧರಿಸಿ 17 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ವರದಿಯಾಗಿದೆ.
ಸೋಮವಾರ ರಾತ್ರಿಯಿಂದಲೇ ಪ್ರಾರಂಭವಾದ ಸರಣಿ ಮೇಘ ಸ್ಫೋಟಗಳು ಮತ್ತು ನಿರಂತರ ಮಳೆಯಿಂದ ಸಾಕಷ್ಟು ಹಾನಿಯುಂಟಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಕೊಚ್ಚಿಹೋಗಿವೆ. ನದಿಗಳು ಪ್ರವಾಹಗಳಾಗಿ ಹರಿಯುತ್ತಿವೆ.
25 ರಿಂದ 30 ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸರ್ಕಾರಿ ಆಸ್ತಿಪಾಸ್ತಿಗಳು ಸಹ ಹಾನಿಗೀಡಾಗಿದ್ದು, ಅನೇಕ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿ ನಿರ್ವಹಣೆಗೆ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
