ಕರ್ನಾಟಕದ ಕಲಬುರಗಿಯ ಆಳಂದದಲ್ಲಿ ಆರು ಸಾವಿರ ಮತಗಳನ್ನು ಅಳಿಸುವ ಯತ್ನ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪುರಾವೆ ಸಹಿತ ವಿವರಿಸಿದ್ದಾರೆ.
ಈ ಬಗ್ಗೆ ಸಂಪೂರ್ಣ ವಿವರ ನೀಡಿರುವ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಜ್ಞಾನೇಶ್ ಕುಮಾರ್ ಅವರು ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವಿದವರನ್ನು ರಕ್ಷಿಸುತ್ತಿದ್ದಾರೆ. ಚುನಾವಣೆ ವೇಳೆ ಮತ್ತು ಚುನಾವಣೆ ನಂತರ ಕೆಲವರು ವ್ಯವಸ್ಥಿತವಾಗಿ ಭಾರತದ ಲಕ್ಷಾಂತರ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಭಾರಿ ಮತ ಕಳವು: ರಾಹುಲ್ ಗಾಂಧಿ ಆರೋಪ
“ನಿರ್ದಿಷ್ಟವಾಗಿ ವಿಪಕ್ಷಗಳಿಗೆ ಮತ ಹಾಕುವ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಒಬಿಸಿಗಳನ್ನು ಗುರಿಯಾಗಿಸಲಾಗುತ್ತಿದೆ. ಇವೆಲ್ಲವೂ ಹಲವು ಬಾರಿ ನಮ್ಮ ಗಮನಕ್ಕೆ ಬಂದಿದೆ. ಆದರೆ ಈಗ ಶೇಕಡ 100ರಷ್ಟು ಪುರಾವೆಯೊಂದಿಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ. ನಾನು ದೇಶವನ್ನು, ಸಂವಿಧಾನವನ್ನು, ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುವವನು. ಆದ್ದರಿಂದ ಯಾವುದೇ ಪುರಾವೆಯಿಲ್ಲದೆ ನಾನು ಆರೋಪ ಮಾಡುವುದಿಲ್ಲ” ಎಂದಿದ್ದಾರೆ.
“ಕರ್ನಾಟಕದ ಆಳಂದಲ್ಲಿ ಯಾರೋ ಆರು ಸಾವಿರ ಮತಗಳನ್ನು ಅಳಿಸಿ ಹಾಕಲು ಯತ್ನಿಸಿದ್ದಾರೆ. ಒಟ್ಟಾರೆಯಾಗಿ ಎಷ್ಟು ಮತದಾರರ ಹೆಸರುಗಳನ್ನು ಅಳಿಸಿಹಾಕಿದ್ದಾರೆ ಎಂಬುದು ನಿರ್ದಿಷ್ಟವಾಗಿ ನಮಗೆ ತಿಳಿದಿಲ್ಲ. ಸಂಖ್ಯೆ ಆರು ಸಾವಿರಕ್ಕೂ ಹೆಚ್ಚಾಗಿರಬಹುದು, ಆದರೆ ಬಳಿಕ ಸಿಕ್ಕಿಬಿದ್ದಿದ್ದಾರೆ. ಬೂತ್ ಮಟ್ಟದ ಅಧಿಕಾರಿಯ ಸಂಬಂಧಿಕರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದಾಗ ಈ ವಿಚಾರ ಬಹಿರಂಗಗೊಂಡಿದೆ” ಎಂದು ಹೇಳಿದ್ದಾರೆ.
“ದೇಶದ ಹಲವು ಭಾಗಗಳಿಂದ ಆಳಂದದಲ್ಲಿರುವ ಮತದಾರರ ಹೆಸರನ್ನು ಅಳಿಸಿಹಾಕುವ ಅರ್ಜಿ ಸಲ್ಲಿಸಲಾಗಿದೆ. ಅದು ಪ್ರಮುಖವಾಗಿ ಕಾಂಗ್ರೆಸ್‌ಗೆ ಮತ ಹಾಕುವವರನ್ನೇ ಗುರಿಯಾಗಿಸಲಾಗಿದೆ. ನಕಲಿ ಖಾತೆಯನ್ನು ಸೃಷ್ಟಿಸಿ ಮತದಾರರ ಹೆಸರನ್ನು ಡಿಲೀಟ್ ಮಾಡುವ ಯತ್ನ ನಡೆದಿದೆ. ಯಾರು ಈ ಕೃತ್ಯ ಎಸಗಿದ್ದು, ಒಟಿಪಿ ಜನರೇಟ್ ಮಾಡಿದ್ದು ಯಾರು ಎಂಬ ಪ್ರಶ್ನೆಗಳು ಈಗ ಮೂಡುತ್ತದೆ” ಎಂದು ವಿವರಿಸಿದ್ದಾರೆ. ಹಾಗೆಯೇ ಮತದಾರರ ಹೆಸರು ಅಳಿಸಿ ಹಾಕಿದ ಸಮಯವನ್ನೂ, ಅದಕ್ಕಾಗಿ ತೆಗೆದುಕೊಂಡಿರುವ ಸಮಯದ ಬಗ್ಗೆಯೂ ರಾಹುಲ್ ಗಾಂಧಿ ವಿವರಿಸಿದ್ದಾರೆ. ಮುಂಜಾನೆ 4 ಗಂಟೆಗೆ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ, ಅದೂ ಕೆಲವೇ ಸೆಕೆಂಡುಗಳಲ್ಲಿ ಡಿಲೀಟ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ವೇದಿಕೆಯಲ್ಲಿ ಆಳಂದ ಸೂರ್ಯಕಾಂತ್ ಗೋವಿಂದ ಎಂಬವರೂ ಮಾತನಾಡಿದ್ದಾರೆ. “ನನ್ನ ಹೆಸರಲ್ಲಿ ನಕಲಿ ಖಾತೆ ಮೂಲಕ ಒಂಬತ್ತು ಜನ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ನನ್ನ ಹೆಸರು ಡಿಲೀಟ್ ಮಾಡಿರುವುದು ಯಾಕೆ ಅಂತ ಬಬಿತಾ ಎಂಬವರು ನನ್ನನ್ನು ಪ್ರಶ್ನಿಸಿದಾಗ ನಾನು ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ತಹಶೀಲ್ದಾರರಿಗೆ ದೂರು ನೀಡಿದೆವು” ಎಂದು ಸ್ಪಷ್ಟನೆ ನೀಡಿದ್ದಾರೆ.
“ಈ ಬಗ್ಗೆ ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಬಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ, ಪ್ರಶ್ನಿಸಿದೆ. ಕರ್ನಾಟಕ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆದರೆ ಕೇಂದ್ರ ಚುನಾವಣಾ ಆಯೋಗ ಬಗ್ಗೆ ಮಾಹಿತಿ ನೀಡಿಲ್ಲ. ಇಲ್ಲಿ ಈ ಕೆಲಸವನ್ನು ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತಮ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿದಿದೆ” ಎಂದು ದೂರಿದ್ದಾರೆ.
“ಇದೇ ರೀತಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಾಡಲಾಗುತ್ತಿದೆ, ಹರಿಯಾಣ, ಉತ್ತರ ಪ್ರದೇಶದಲ್ಲಿಯೂ ಮತ ಕಳವು ಮಾಡಲಾಗಿದೆ. ಈ ಬಗ್ಗೆ ನಮ್ಮಲ್ಲಿ ಪುರಾವೆಯಿದೆ. ಸಾಫ್ಟ್‌ವೇರ್ ಬಳಸಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇವರೆಲ್ಲರನ್ನೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ಅವರು ರಕ್ಷಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
