ವಿಜಯಪುರ ನಗರ ಶಾಸಕ ಬಸನಗೌಡ ಆರ್ ಪಾಟೀಲ ಯತ್ನಾಳ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಹ್ವಾನವನ್ನು ವಿರೋಧಿಸುವ ಜೊತೆಗೆ ದಲಿತ ಮಹಿಳೆಯರನ್ನು ಅವಮಾನಿಸಿದ್ದ ಹೇಳಿಕೆಯನ್ನು ಖಂಡಿಸಿ, ಯತ್ನಾಳ್ ದಲಿತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಆಗ್ರಹಿಸಿದ್ದಾರೆ.
ಕಳೆದ ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ದಲಿತ ಮಹಿಳೆಯರಿಗೆ ತಾಯಿ ಚಾಮುಂಡೇಶ್ವರಿಗೆ ಹೂ ಮುಡಿಸುವ ಅವಕಾಶ ಇಲ್ಲ ಎಂದು ಹೇಳಿದ್ದರು. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸುತ್ತದೆ. ಯತ್ನಾಳ್ ಅವರು ಅಸ್ಪೃಷ್ಯತೆಯನ್ನು ಪುನರುಚ್ಚರಿಸಿ ಅವಮಾನಗೊಳಿಸಿದ್ದನ್ನು ತೀವ್ರವಾಗಿ ಖಂಡಿಸಿರುವ ವಸಂತ, ಈ ಹೇಳಿಕೆಯನ್ನು ವಾಪಸು ಪಡೆದು ದಲಿತರ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: ವಿಜಯಪುರ | ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ಆಸ್ಪತ್ರೆ ಎದುರೇ ಹೆರಿಗೆ
ಅಲ್ಪಸಂಖ್ಯಾತರ ಬಗ್ಗೆ ನೇರವಾಗಿ ಟೀಕಿಸುತ್ತಿರುವ ಇವರು ದಲಿತರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಮನಸ್ಥಿತಿಯುಳ್ಳವರು ಜನಪ್ರತಿನಿಧಿಗಳಾಗಲು ಯೋಗ್ಯರಲ್ಲ. ಬಿಜೆಪಿಯ ಮನುವಾದವನ್ನು ಪ್ರತಿಪಾದಿಸುವವರು ರಾಜಕೀಯದಲ್ಲಿ ಇರಲು ಅರ್ಹರೇ ಎಂದು ಪ್ರಶ್ನಿಸಿರುವ ಅವರು, ಸನಾತನ ಧರ್ಮದ ಅರ್ಥವೇ ಅರಿಯದೆ ಮಾತನಾಡುವುದು ಮತ್ತು ದಲಿತರ ಬಗ್ಗೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಮಾತನಾಡುವುದು ಖಂಡನಾರ್ಹ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.