ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದಲ್ಲಿ ಅಪ್ರಾಪ್ತನೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಪ್ರಾಪ್ತನೊಬ್ಬ ಮೀನಾಕ್ಷಮ್ಮ(43)ನ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಇವರಿಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಅಂತೆಯೇ ಸೆಪ್ಟೆಂಬರ್ 15ರಂದು ಮತ್ತೊಮ್ಮೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಆರೋಪಿಯು ಮೀನಾಕ್ಷಮ್ಮನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆಯು ಬಂದೂರು ಗ್ರಾಮದ ಪವನ್ ಎಂಬುವವರ ತೋಟದಲ್ಲಿ ನಡೆದಿದೆ.
ಕೊಲೆ ಆರೋಪಿಯಾದ ಅಪ್ರಾಪ್ತನು ಚಿಕ್ಕಂದಿನಲ್ಲೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದನು. ಹಾಗಾಗಿ ಈತ ಮೀನಾಕ್ಷಮ್ಮನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆಕೆ ತಮ್ಮ ಗ್ರಾಮದಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿದ್ದು, ಆಕೆ ಮನೆ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಕೊಲೆಗೆ ಕಾರಣವಾಗಿದೆ.
ತಾಯಿಯ ಸಾವು ಅನುಮಾನಾಸ್ಪದವಾಗಿದೆಯೆಂದು ಆರೋಪಿಸಿ ಮೀನಾಕ್ಷಮ್ಮನ ಪುತ್ರ ದಿನೇಶ್ ಸೆಪ್ಟೆಂಬರ್ 16ರಂದು ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಯ ಸತ್ಯಾಂಶ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ; ಇಬ್ಬರು ರೈತರು ಗಂಭೀರ
ಸತ್ಯಾಂಶ ಬೆಳಕಿಗೆ ಬರುತ್ತಿದ್ದಂತೆಯೇ ದಿನೇಶ್ ಎಂಬುವವರು ಸೆಪ್ಟೆಂಬರ್ 17ರಂದು ಆರೋಪಿಯ ವಿರುದ್ಧ ಕೊಲೆ ಪ್ರಕರಣದ ದೂರು ದಾಖಲಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಿಂದ ಬಂದೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಈ ರೀತಿಯ ಘಟನೆಗೆ ಕಾರಣವೇಂದು ಚರ್ಚಿಸುತ್ತಿದ್ದಾರೆ. ಜಾವಗಲ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.