ಗಂಗಾವತಿ ನಗರದಲ್ಲಿ ಗಣೇಶ ವಿರ್ಸಜನೆಯ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಯತ್ನಾಳ ಸಾರ್ವಜನಿಕವಾಗಿ ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮತನಾಡಿ ಅವಮಾನಿಸಿದ್ದಾರೆ ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕೆಂದು ಸಿಂಧನೂರು ಘಟಕದಿಂದ ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸಿದರು.
ನಗರದ ತಹಶೀಲ್ದಾರ ಕಚೇರಿ ಮುಂದೆ ಸಂಘಟನಾಕಾರರು ಪ್ರತಿಭಟನೆ ನಡೆಸಿ ಯತ್ನಾಳ ಹೇಳಿಕೆ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಘೋಷಣೆ ಕೂಗಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ ಹೂ ಹಾಕಲು ಸನಾತನಿ ಧರ್ಮಗಳಾಗಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಲ್ಲದೇ, ದಲಿತ ಸಮುದಾಯವನ್ನು ಅವಮಾನಿಸಿ ಜಾತಿ ನಿಂದನೆ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿದ್ದುಕೊಂಡು ಇಂತಹ ಹೇಳಿಕೆ ನೀಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕಿಡಿಕಾರಿದರು.
ಜಾತಿ-ಜಾತಿಗಳ ಹಾಗೂ ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿಸುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿರುವ ಬಸನಗೌಡ ಯತ್ನಾಳ ಕಳೆದ ಎರಡ್ಮೂರು ತಿಂಗಳಲ್ಲಿ ಹತ್ತಾರು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿದಲ್ಲದೇ ಅಶಾಂತಿಗೆ ಕಾರಣನಾಗಿದ್ದಾನೆ. ಇಷ್ಟಾದರೂ ಈತನ ಮೇಲೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ಸರ್ಕಾರ, ಅಧಿಕಾರಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನ ಮೂಡುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, ದಲಿತ ಮಹಿಳೆಯರನ್ನು ಜಾತಿಯ ಕಾರಣಕ್ಕೆ ನಿಂದಿಸಿ ನಂತರ ತಕ್ಷಣ ಕೋರ್ಟ್ ಮೊರೆ ಹೋಗಿ ಬಲವಂತದ ಕ್ರಮ ಜರುಗಿಸದಂತೆ ತಡೆಯಾಜ್ಞೆ ತಂದಿರುವುದು ನೋಡಿದರೆ ಈತನ ದ್ವೇಷ ಭಾಷಣಕ್ಕೆ ತಡೆಯೇ ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಮತ್ತು ಅದರಡಿಯಲ್ಲಿ ರಚನೆಯಾಗಿರುವ ಕಾನೂನನ್ನೇ ಉಲ್ಲಂಘಿಸಿರುವ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿರುಪಮ್ಮ ಉದ್ಬಾಳ ಜೆ. ಮಾತನಾಡಿ, ಮನುವಾದಿ ಬಸನಗೌಡ ಯತ್ನಾಳ ಕಾನೂನು ಬಾಹಿರವಾಗಿ ಮನಬಂದಂತೆ ಮಾತನಾಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ ಇಂದಿಗೂ ಅಸ್ಪೃಶ್ಯತೆ ಆಚರಣೆ ನಿಂತಿಲ್ಲ ಎನ್ನುವುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ. ಸದನದಲ್ಲಿ ಕಾನೂನು ರಚಿಸುವವರೇ, ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದರೆ ಹೇಗೆ ? ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯಲಗಟ್ಟ ಮತ್ತು ಪಲಕನಮರಡಿ ಗ್ರಾಮಗಳ ಅಭಿವೃದ್ಧಿಗೆ ಕೆಪಿಆರ್ ಎಸ್ ಆಗ್ರಹ
ಈ ಸಂದರ್ಭದಲ್ಲಿ ಡಿಎಸ್‌ಎಸ್ ಸಂಚಾಲಕ ಮಂಜುನಾಥ ಗಾಂಧಿನಗರ, ಸಿಪಿಐ(ಎಂಎಲ್) ಲಿಬರೇಶನ್‌ನ ಆರಎಚ್.ಕಲಮಂಗಿ, ಯಮನೂರಪ್ಪ, ಹುಸೇನಪ್ಪ ಅರಳಹಳ್ಳಿ, ಬಸವರಾಜ, ದೇವಪ್ಪ ಅರಳಹಳ್ಳಿ, ರಮೇಶ ಅರಳಹಳ್ಳಿ, ಮಹಿಳಾ ಮುಖಂಡರಾದ ಇಂದ್ರಮ್ಮ, ಶಾಂಭವಿ ಸೇರಿದಂತೆ ಇನ್ನಿತರರಿದ್ದರು.
