ನರೇಂದ್ರ ಮೋದಿಯವರು ಮೊದಲ ಬಾರಿಗೆ ದೇಶದ ಪ್ರಧಾನ ಮಂತ್ರಿ ಆದಾಗ ‘ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಕೊಡುತ್ತೇನೆ’ ಎಂದಿದ್ದರು. ಆದರೆ, ಇಂದು ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಯುವ ಘಟಕ ಹಣ್ಣು ಮಾರುವ ಮೂಲಕ ವಿನೂತನವಾಗಿ ಪ್ರತಿಭಟಿಸಿತು.
ನರೇಂದ್ರ ಮೋದಿಯವರ ಜನ್ಮದಿನದಂದು ಕಾಂಗ್ರೆಸ್ ಪಕ್ಷದ ಯುವ ಘಟಕದದಿಂದ ಹಣ್ಣುಮಾರುವ ಮೂಲಕ ನಿರುದ್ಯೋಗ ದಿನವೆಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬಳ್ಳಾರಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, “ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳನ್ನು ಕಲ್ಪಸಿಕೊಡುತ್ತೇವೆ. ಈ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ಹೋಗಲಾಡಿಸುತ್ತೇವೆಂದು ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ ಕೋಟ್ಯಂತರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲು ವಿಫಲವಾಗಿದ್ದಾರೆ. ಅಲ್ಲದೆ ಯುವಕರಿಗೆ ಪಕೋಡ ಹಾಗೂ ಚಹಾ ಮಾರಿ ಜೀವನ ಕಟ್ಟಿಕೊಳ್ಳುವಂತೆ ಹೇಳುತ್ತಿದ್ದಾರೆ. ಇದು ಮೋದಿಯವರು ದೇಶದ ಯುವಕರ ಬಗ್ಗೆ ಹೊಂದಿರುವ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಜತೆಗೆ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ; ದಲಿತರ ಕ್ಷಮೆ ಕೇಳಲು ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹ
“ಕೇವಲ ಮತಗಳ ಕಳ್ಳತನದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಜನಸಾಮಾನ್ಯರ ಮೇಲೆ ಎಲ್ಲ ರೀತಿಯ ಹೊರೆಗಳನ್ನು ಹೋರಿಸುತ್ತ ದೇಶವನ್ನು ಸಂಪೂರ್ಣವಾಗಿ ಅಧೋಗತಿಗೆ ತಳ್ಳುತ್ತಿದೆ. ಕೇಂದ್ರ ಸರ್ಕಾರ ಜನಪರವಾದ ಸರ್ಕಾರವಲ್ಲ. ಮೋದಿಯವರು ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ಕಮ್ಮಿ ಸೇರಿದಂತೆ ಯುವ ಘಟಕದ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.