ಖಾಸಗಿ ಬಸ್ ಚಾಲಕನೊಬ್ಬ ಟಿಕೆಟ್ ಬುಕಿಂಗ್ ದಾಖಲೆಯಿಂದ ಫೋನ್ ನಂಬರ್ ಕದ್ದು, ಮಹಿಳೆಗೆ ಅಶ್ಲೀಲ ವಿಡಿಯೋ ಕಳಿಸುವ ಮೂಲಕ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ. ಅಶೀಲ ವಿಡಿಯೋಗಳನ್ನು ಕಳಿಸುತ್ತಿದ್ದ ಕಾಮುಕ ಚಾಲಕನನ್ನು ಪತ್ತೆಹಚ್ಚಿದ ಮಹಿಳೆ ಆತನಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸಿದ್ದಾರೆ. ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಕಂಕವ್ಲಿ ಮತ್ತು ಮುಂಬೈ ನಡುವೆ ಆಗ್ಗಾಗ್ಗೆ ಪ್ರಯಾಣಿಸುತ್ತಿದ್ದ ಮಹಿಳೆ, ತಮ್ಮ ಬಸ್ ಬುಕಿಂಗ್‌ಗಾಗಿ ಕಂಕವ್ಲಿಯಲ್ಲಿರುವ ಖಾಸಗಿ ಟ್ರಾವೆಲ್ಸ್ ಕಂಪನಿಯ ಕಚೇರಿಯನ್ನು ಸಂಪರ್ಕಿಸುತ್ತಿದ್ದರು. ಕೆಲವು ತಿಂಗಳ ಹಿಂದೆ, ಅದೇ ಕಂಪನಿಯಿಂದ ತಮ್ಮ ಬಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದರು.
ಆ ನಂತರ, ಆಕೆಯ ಮೊಬೈಲ್‌ಗೆ ಫೋನ್ ನಂಬರ್‌ವೊಂದರಿಂದ ಅಶ್ಲೀಲ ವಿಡಿಯೋಗಳು ಬರಲಾರಂಭಿಸಿದ್ದವು. ಖಾಸಗಿ ಬಸ್‌ನ ಚಾಲಕ ಟಿಕೆಟ್ ಬುಕಿಂಗ್ ದಾಖಲೆಯಿಂದ ಆಕೆಯ ದೂರವಾಣಿ ಸಂಖ್ಯೆಯನ್ನು ಕದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ ಎಂದು ವರದಿಯಾಗಿದೆ.
ನಿರಂತರವಾಗಿ, ಅಶ್ಲೀಲ ವಿಡಿಯೋಗಳನ್ನು ಕಳಿಸುತ್ತಿದ್ದ ಆತನನ್ನು ಪತ್ತೆ ಹೆಚ್ಚಲು ಮುಂದಾದ ಮಹಿಳೆ, ಕಂಕವ್ಲಿ ಬಸ್ ನಿಲ್ದಾಣದ ಬಳಿಯಿರುವ ಕಂಪನಿಯ ಬುಕಿಂಗ್ ಕಚೇರಿಗೆ ತೆರಳಿದ್ದು, ಆರೋಪಿ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕವಾಗಿ ಆತನ ಕಪಾಳಕ್ಕೆ ಹಲವು ಬಾರಿ ಬಾರಿಸಿದ್ದಾರೆ.
ಈ ಘಟನೆಯ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಾಗ್ಯೂ, ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಈವರೆಗೆ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.