ನಿರಂತರ ಮಳೆಯಿಂದ ಬೆಳೆಹಾನಿಯಾಗಿದ್ದು ಸೂಕ್ತ ಪರಿಹಾರ ಸೇರಿದಂತೆ ರೈತರ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಮಹಾ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಗೆ ಹತ್ತಿ, ತೊಗರಿ, ಸಜ್ಜೆ ಮತ್ತು ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಶೇ.50 ರಷ್ಟು ನಷ್ಟವಾಗಿದೆ ಮತ್ತು ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ 3 ವರ್ಷಗಳಿಂದ ಮೆಣಸಿನಕಾಯಿ ಮತ್ತು ಹತ್ತಿ ಬೆಳೆದ ರೈತರು ಬೆಲೆ ಇಲ್ಲದೆ ತುಂಬಾ ನಷ್ಟದಲ್ಲಿದ್ದು, ಹತ್ತಿಗೆ 10,000 ರೂ. ಮೆಣಸಿನಕಾಯಿಗೆ 15,000 ರೂ. ಬೆಂಬಲ ಬೆಲೆಯೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಬೇಕು ಮತ್ತು ಇನ್ನುಳಿದ ಬೆಳೆಗಳಾದ ಜೋಳಕ್ಕೆ 3500 ಭತ್ತಕ್ಕೆ 3500 ರೂ.ಗೆ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರ ಎಡದಂಡೆ ನಾಲೆಯ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಜೋಡಿಸಲು ಈ ವರ್ಷದ ಬೇಸಿಗೆ ಬೆಳೆಗೆ ಯಾವುದೇ ಧಕ್ಕೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಿ ಗೇಟ್‌ಗಳನ್ನು ಅಳವಡಿಸಬೇಕು ಮತ್ತು ಆಕ್ರಮ ನೀರಾವರಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ನಾರಾಯಣಪುರ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಭಾರಿ ಭಷ್ಟಾಚಾರ ನಡೆದಿದ್ದು ಸೂಕ್ತ ತನಿಖೆಗೆ ಆದೇಶ ನೀಡಬೇಕು ಮತ್ತು ಅರೆ ಬರೆ ಮಾಡಿದ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ಕೊಡಬೇಕು ಎಂದು ಮನವಿ ಮಾಡಿದರು.
ಧಾರಾಕಾರ ಮಳೆಯಿಂದ ಕಾಲುವೆಯ ಎರಡೂ ಬದಿ ರಸ್ತೆಗಳು ಹಾಳಾಗಿದ್ದು, ರೈತರ ಹೊಲಗಳಿಗೆ ಹೋಗಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಮಾಡಲು ನೀರಾವರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಫಸಲ್ ಬೀಮಾ ಯೋಜನೆಯಿಂದ ರೈತರಿಗೆ ಬಹಳ ಮೋಸವಾಗುತ್ತಿದ್ದು, ಅವ್ಯವಹಾರಗಳನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕು. ಹಲವು ಪ್ರಕರಣಗಳು ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದು, ಯಾವುದೇ ತನಿಖೆಯಾಗದೇ ಕಾಲಹರಣ ಮಾಡುತ್ತಿದ್ದಾರೆ ಕೂಡಲೇ ತಕ್ಷಣ ಅವುಗಳನ್ನು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ದಲಿತ ಮಹಿಳೆಯರ ಬಗ್ಗೆ ಅವಮಾನ ಮಾಡಿದ ಯತ್ನಾಳ – ಶಾಸಕ ಸ್ಥಾನದಿಂದ ವಜಾಗೊಳಿಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಸೂಗುರಯ್ಯ ಆರ್.ಎಸ್.ಮಠ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಪ್ಪ ಕಾರಬಾರಿ, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಮಾಲಿ ಪಾಟೀಲ್, ಲಿಂಗಾರೆಡ್ಡಿ ಪಾಟೀಲ್, ಬೂದಯ್ಯಸ್ವಾಮಿ ಗಬ್ಬೂರು, ಸಿದ್ದಯ್ಯ ಸ್ವಾಮಿ, ಹೆಚ್.ಶಂಕ್ರಪ್ಪಗೌಡ, ಮಲ್ಲಣ್ಣಗೌಡ, ಎ.ಗೋವಿಂದ ನಾಯಕ, ಬಸವರಾಜ ನವಲಕಲ್, ವೀರೇಶ, ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು
