ದಸರಾ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರ ದಲಿತ ವಿರೋಧಿ ಮನಸ್ಥಿತಿಯನ್ನು ಭೀಮ್ ಆರ್ಮಿ ಜಿಲ್ಲಾ ಸಂಘಟನೆ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಯ್ಯನಪಾಳ್ಯ ಅವರು ಹೇಳಿದರು.
ತುಮಕೂರು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ದಸರಾದಲ್ಲಿ ಚಾಮುಂಡಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಜನಪ್ರತಿನಿಧಿಯಾಗಿ ಜನಾಂಗೀಯ ದ್ವೇಷ ಬಿತ್ತುವ ಬದಲು ಸರ್ವಜನಾಂಗಗಳನ್ನು ಬೆಸೆಯುವ ಕೆಲಸ ಮಾಡಬೇಕು. ಎಲ್ಲ ಧರ್ಮದವರನ್ನು ಭಾರತೀಯರೆಂದೇ ನೋಡುವಂತೆ ಈಗ ಕೋರ್ಟ್ ಕೂಡ ಚಾಟಿ ಬೀಸಿದೆ. ನಿತ್ಯ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸುತ್ತಿರುವ ಬಸನಗೌಡ ಪಾಟೀಲ ಯತ್ನಾಳರನ್ನು ಈಗಾಗಲೇ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದ್ದರೂ ಇವರ ನಾಲಿಗೆ ಉದ್ದ ಕಡಿಮೆಯಾಗಿಲ್ಲ. ಆದರೆ, ಈತನನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸನಾತನ ಧರ್ಮದವರು ಎಂದರೆ ಯಾರು? ಬ್ರಾಹ್ಮಣ, ಲಿಂಗಾಯತರು ಮಾತ್ರವಾ? ದಲಿತರು ಹಿಂದೂಗಳಲ್ಲವೇ? ಹಿಂದುತ್ವವಾದಿಗಳ ನಿಕೃಷ್ಟ ಮನಸ್ಥಿತಿ ಯತ್ನಾಳ್ ಹೇಳಿಕೆಯಿಂದ ಬಹಿರಂಗಗೊಂಡಿದೆ. ದಲಿತರನ್ನು ಅಸ್ಪೃಷ್ಯರನ್ನಾಗಿಯೇ ಉಳಿಸುವ ಆರ್‌ಎಸ್‌ಎಸ್ ಕುತಂತ್ರ ಫಲಿಸದು. ರಾಜ್ಯದ ಯಾವುದೇ ಮೂಲೆಯಲ್ಲಿ ದಲಿತ ವಿರೋಧಿ ಮನಸ್ಥಿತಿಗಳು ಚುನಾವಣೆಗೆ ನಿಂತರೆ ಠೇವಣಿ ಕಳೆದುಕೊಳ್ಳಲಿದ್ದಾರೆ. ಅಂತೆಯೇ ಮುಂದಿನ ಚುನಾವಣೆಯಲ್ಲಿ ಯತ್ನಾಳ್ ಅವರನ್ನು ಹೀನಾಯವಾಗಿ ಸೋಲಿಸಲಿದ್ದೇವೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಯ್ಯನಪಾಳ್ಯ ಅವರು ಎಚ್ಚರಿಕೆ ನೀಡಿದರು.
ಬಹುತ್ವಕ್ಕೆ ಹೆಸರಾಗಿರುವ ಕರ್ನಾಟಕದಲ್ಲಿ ಕೋಮು ದ್ವೇಷ ಹರಡುತ್ತಿರುವ ಇಂಥ ನೀಚ ಮನಸ್ಥಿತಿಯವರನ್ನು ಸರ್ಕಾರ ಗುರುತಿಸಿ ರಾಜ್ಯದಿಂದಲೇ ಗಡಿಪಾರು ಮಾಡಿ ಆದೇಶ ಹೊರಡಿಸಬೇಕು ಹಾಗೂ ಇಂತಹ ಕೋಮು ಕ್ರಿಮಿಗಳ ಬಗ್ಗೆ ಬಾಲಿಷ ಧೋರಣೆ ತಾಳದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಆಗ್ರಹಿಸಿದರು.