ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ನೀಡಲು ಅನುಮತಿ ನೀಡಲಾಗಿದೆ.
ಈ ನಿರ್ಣಯದೊಂದಿಗೆ, ಸಮಾಜದ ಅಂಚಿನಲ್ಲಿರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಮಹತ್ತರ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ.
ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳು ಕೈಗೊಳ್ಳಲಾಗಿದೆ. ಬೆಂಗಳೂರಿನ ದಾಸನಪುರ, ಕೋಲಾರ ಮತ್ತು ಮೈಸೂರಿನ ಎಪಿಎಂಸಿಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಬಯೋ ಸಿಎನ್‌ಜಿ ಘಟಕಗಳನ್ನು 74.88 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಪರಿಷ್ಕೃತ 618.75 ಕೋಟಿಗಳ ಅಂದಾಜು ಮಂಜೂರಾಗಿದೆ.
ಇದೇ ರೀತಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಡಿಯಾಕ್ ಯೂನಿಟ್‌ಗಾಗಿ 10.89 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಾಧನಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಆರ್‌ಡಿಪಿಆರ್ ವಿಶ್ವವಿದ್ಯಾಲಯ ಆವರಣದ ಅಭಿವೃದ್ಧಿ ಕಾಮಗಾರಿಗಳಿಗೆ 48.43 ಕೋಟಿಗಳ ಪರಿಷ್ಕೃತ ಅಂದಾಜು, ಗದಗ ಜಿಲ್ಲೆಯ ರೋಣ ತಾಲ್ಲೂಕಿನ 9 ಕೆರೆಗಳಿಗೆ ಮಲಪ್ರಭಾ ಕಾಲುವೆಯಿಂದ ನೀರು ಎತ್ತಿ ತುಂಬಿಸುವ 43.50 ಕೋಟಿಗಳ ಯೋಜನೆಗೂ ಅನುಮೋದನೆ ದೊರೆತಿದೆ. ಅಲ್ಲದೆ, ಮಲಪ್ರಭಾ ಕಾಲುವೆಯ ಆಧುನೀಕರಣ ಕಾಮಗಾರಿಗೆ 31.08 ಕೋಟಿಗಳನ್ನು ಖರ್ಚುಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಬಳ್ಳಾರಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ತುಮಕೂರು ಕಾರಾಗೃಹಗಳಲ್ಲಿ 16.75 ಕೋಟಿಗಳ ವೆಚ್ಚದಲ್ಲಿ “ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್” ಮೊಬೈಲ್ ಟವರ್‌ಗಳನ್ನು ಅಳವಡಿಸಲು ಅನುಮೋದನೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?
ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಛಲವಾದಿ ಮಹಾಸಭಾ ಸಮುದಾಯ ಭವನಕ್ಕೆ 22.33 ಕೋಟಿಗಳ ಪರಿಷ್ಕೃತ ಅಂದಾಜು ಮಂಜೂರಾಗಿದೆ. 90 ಸರ್ಕಾರಿ ಐಟಿಐಗಳಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ತರಬೇತಿ ಪಠ್ಯಕ್ರಮಕ್ಕಾಗಿ 50 ಕೋಟಿಗಳ ಮೌಲ್ಯದ ಉಪಕರಣಗಳನ್ನು ಒದಗಿಸಲು ಅನುಮೋದನೆ ದೊರೆತಿದೆ.
ಬೆಂಗಳೂರು ನಗರ ಗಾಂಧಿನಗರ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 58.44 ಕೋಟಿಗಳ ಅಂದಾಜು ಮೊತ್ತಕ್ಕೆ ಮಂಜೂರಾತಿ ನೀಡಲಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕರ್ನಾಳ್ ಏತನೀರಾವರಿ ಯೋಜನೆಗೆ 50.75 ಕೋಟಿಗಳನ್ನು ಮಂಜೂರು ಮಾಡಲಾಗಿದೆ.
ರಾಜ್ಯದ 9,337 ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಸಿದ್ಧಪಡಿಸಲು ಹೊಸ ಪಾತ್ರೆ-ಪರಿಕರಗಳನ್ನು ಒದಗಿಸಲು 21.55 ಕೋಟಿಗಳ ವೆಚ್ಚವನ್ನು ಸಚಿವ ಸಂಪುಟ ಅನುಮೋದಿಸಿದೆ.
ಈ ಎಲ್ಲ ನಿರ್ಣಯಗಳ ನಡುವೆ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಪ.ಜಾ/ಪ.ಪಂ ಕುಟುಂಬಗಳಿಗೆ ಉದ್ಯೋಗ ಭರವಸೆ ನೀಡಿರುವುದು ಸಮಾಜಮುಖಿ ಹೆಜ್ಜೆಯಾಗಿ ಗಮನ ಸೆಳೆದಿದೆ.