ಬೀದರ್ ನಗರದಲ್ಲಿ ನೂತನ ಜಿಲ್ಲಾ ಸಂಕೀರ್ಣ ಕಾಮಗಾರಿ ಆರಂಭ ಹಿನ್ನೆಲೆ ಚಿಕ್ಕಪೇಟ ರಸ್ತೆಯ ಗಾಂಧಿ ಭವನದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತಗೊಂಡಿರುವ ಜಿಲ್ಲಾಧಿಕಾರಿ ಕಚೇರಿಗೆ ನಗರದ ಹಳೆ ಬಸ್ ನಿಲ್ದಾಣದಿಂದ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಭೀಮ್ ಟೈಗರ್ ಸೇನಾ ಹಾಗೂ ಭಾರತೀಯ ಜೈಭೀಮ ದಳದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಗುರುವಾರ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ʼಸ್ಥಳಾಂತರವಾದ ಜಿಲ್ಲಾಧಿಕಾರಿ ಕಚೇರಿ ನಗರದಿಂದ ದೂರದಲ್ಲಿದೆ. ವಿವಿಧ ಕೆಲಸ ಕಾರ್ಯಗಳಿಗೆ ಕಚೇರಿಗೆ ಹೋಗುವ ಸಾರ್ವಜನಿಕರಿಗೆ ಹಾಗೂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಬೆಳಿಗ್ಗೆ 8 ಗಂಟೆಯಿಂದ ಕಚೇರಿ ಸಮಯದವರೆಗೆ ಹಳೆಯ ಬಸ್ ನಿಲ್ದಾಣದಿಂದ ಹೊಸ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬಸ್ ಓಡಿಸಬೇಕುʼ ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಸ್ಥಳಾಂತರವಾದ ಜಿಲ್ಲಾಧಿಕಾರಿಗಳ ಕಚೇರಿಯ ಮಾಹಿತಿ ಇಲ್ಲದೆ ಪರದಾಡುತ್ತಿದ್ದಾರೆ. ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ ಸ್ಥಳಾಂತರವಾದ ಜಿಲ್ಲಾಧಿಕಾರಿಗಳ ಕಚೇರಿ ಸೇರಿ ಎಲ್ಲ ಕಚೇರಿಗಳ ಬಗ್ಗೆ ದೊಡ್ಡ ಗಾತ್ರದ ಬ್ಯಾನರ್/ಫ್ಲೆಕ್ಸ್ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಜೈಭೀಮ ದಳ ಜಿಲ್ಲಾಧ್ಯಕ್ಷ ಅಂಬೇಡ್ಕರ್ ಸಾಗರ, ಭೀಮ್ ಟೈಗರ್ ಸೇನಾ ಜಿಲ್ಲಾಧ್ಯಕ್ಷ ನರಸಿಂಗ್ ಸಾಮ್ರಾಟ್, ಉಪಾಧ್ಯಕ್ಷ ತುಕಾರಾಮ ಎಸ್. ಬೌದ್ಧೆ, ರಾಜಕುಮಾರ ಸೈನ್ಯ ಮತ್ತಿತರರಿದ್ದರು.