ಪ್ರಭಾವೀ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ತನ್ನ ವಿಡಿಯೋವನ್ನು ಇನ್ಯಾರೋ ಅಪ್‌ಲೋಡ್ ಮಾಡಿ ಹಂಚಿಕೊಂಡರೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹಾಸನ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪವನ್ ಕೆ (21) ಮೃತ ಯುವಕ.
ಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಪವನ್ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ. ಆ ಸಮಯದಲ್ಲಿ ಒಬ್ಬ ಯುವತಿಯ ಕೈ ಹಿಡಿದು ಆತ್ಮೀಯವಾಗಿ ಮಾತನಾಡುತ್ತಿದ್ದ. ಈ ದೃಶ್ಯವನ್ನು ಅಪರಿಚಿತ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಚಿತ್ರೀಕರಿಸಿ chinnivasi8 ಎಂಬ ಇನ್ಸ್ಟಾಗ್ರಾಂ ಖಾತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಳು.

ವಿಡಿಯೋ ವೈರಲ್ ಆಗಿ, ಟೀಕೆ-ವ್ಯಂಗ್ಯಗಳು ಹೆಚ್ಚಾದ ಹಿನ್ನೆಲೆ ಪವನ್ ತೀವ್ರ ಮನನೊಂದು, ತಾನು ಜೊತೆಗಿದ್ದ ಯುವತಿಯರಿಗೆ ತೊಂದರೆ ಉಂಟಾಗಬಹುದು ಎಂದು ಭಯಗೊಂಡಿದ್ದಾನೆ. ವಿಡಿಯೋ ಡಿಲೀಟ್ ಮಾಡಿಸಲು ಸಹ ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದೇ ಆತಂಕದಲ್ಲಿದ್ದ ಪವನ್, ಗುರುವಾರ (ಸೆ.18) ಕಾಲೇಜು ಮುಗಿಸಿಕೊಂಡು ಮನೆಗೆ ಹಿಂತಿರುಗಿ, ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಹಾಸನ | ಕೀಳರಿಮೆ ಬಿಟ್ಟು ಮೂಲ ಜಾತಿಯನ್ನು ಗೌರವಿಸಿ: ಲೋಕೇಶ್
ಪವನ್ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಪುಟ್ಟಲಕ್ಷ್ಮೀ ಗಾರೆ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದರು. ಮಗನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪವನ್ ಸಾವಿಗೆ ಕಾರಣಳಾದ ಅಪರಿಚಿತ ಯುವತಿಯನ್ನು ಬಂಧಿಸಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದು, ಮುಂದೆ ಇಂತಹ ಮಾನಹಾನಿ ಯಾರಿಗೂ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.