ಶಿವಮೊಗ್ಗ, ಕನ್ನಡದ ಪರದೆ ಮೇಲೆ ಸಾಹಸ, ಶಿಸ್ತು, ಕಲೆ ಮತ್ತು ಮಾನವೀಯತೆಯ ಮೂರ್ತಿ ರೂಪವಾಗಿ ಅಜರಾಮರವಾಗಿರುವ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವು ಶಿವಮೊಗ್ಗದಲ್ಲಿ ಭಾವಪೂರ್ಣವಾಗಿ ಜರುಗಿತು.
ಇದು ಕೇವಲ ಜನ್ಮದಿನಾಚರಣೆ ಅಲ್ಲ, ಅಭಿಮಾನಿಗಳ ಹೃದಯಗಳಲ್ಲಿ ಇನ್ನೂ ಜೀವಂತವಾಗಿರುವ ಸಾಹಸಸಿಂಹನ ನೆನಪಿನ ಹಬ್ಬವಾಗಿತ್ತು.
ವಿನೋಬನಗರದ ಶ್ರೀರಾಮ ನಗರವು ಈ ವಿಶೇಷ ದಿನದಂದು ಒಂದು ಸಾಂಸ್ಕೃತಿಕ ಉತ್ಸವದ ವಾತಾವರಣವನ್ನು ಧರಿಸಿತ್ತು. ಪುಟ್ಟ ಮಕ್ಕಳು ಕೈಯಲ್ಲಿ ಹೂಗುಚ್ಛಗಳೊಂದಿಗೆ, ಮಹಿಳೆಯರು ದೀಪ ಹಚ್ಚಿ, ಯುವಕರು ಘೋಷಣೆಗಳ ಮೂಲಕ ತಮ್ಮ ಮೆಚ್ಚಿನ ನಟನನ್ನು ಸ್ಮರಿಸಿದರು.

ವೃತ್ತದ ಮಧ್ಯದಲ್ಲಿ ಅಲಂಕೃತಗೊಂಡಿದ್ದ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಭಕ್ತಿಭಾವದಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಅಭಿಮಾನಿಗಳಿಂದ ನಡೆದ ಕೇಕ್ ಕತ್ತರಿಸುವ ಸಮಾರಂಭ.
ವಿಷ್ಣುವರ್ಧನ್ ಅವರ ಪರದೆ ಜೀವನದ ಹಿರಿಮೆಯನ್ನು ಆಚರಿಸುವ ಸಂಕೇತವಾಗಿತ್ತು. ಪ್ರತಿಯೊಂದು ಹೂವು, ಪ್ರತಿಯೊಂದು ಚಪ್ಪಾಳೆ – ಎಲ್ಲವೂ ಒಟ್ಟಿಗೆ ಸೇರಿ ವಿಷ್ಣು ಇನ್ನೂ ನಮ್ಮೊಂದಿಗೇ ಇರುವುದು ಎಂಬ ಭಾವನೆಯನ್ನು ಮೂಡಿಸಿತು.
ಈ ಸಂದರ್ಭದಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅವರು ಮಾತನಾಡಿ,“ವಿಷ್ಣುವರ್ಧನ್ ಅವರ ಸಿನೆಮಾ ಕೇವಲ ಮನರಂಜನೆಗಾಗಿ ಇರಲಿಲ್ಲ. ಅದು ಸಮಾಜಕ್ಕೆ ಸಂದೇಶ ನೀಡುವ ಮಾಧ್ಯಮವಾಗಿತ್ತು. ಅವರ ವ್ಯಕ್ತಿತ್ವವೇ ಕನ್ನಡಿಗರ ಗೌರವ”ಎಂದು ಹೇಳಿದರು.

ಸ್ಥಳೀಯ ಮುಖಂಡರಾದ ಪ್ರಕಾಶ್, ಶಂಕರ್, ಹರೀಶ್, ಪ್ರಭಾಕರ್, ಲಕ್ಷ್ಮಣ, ಗಣೇಶ್, ಶಶಿಕುಮಾರ್, ಪುಷ್ಪಮ್ಮ, ದಯಾನಂದ ಸಲಗಿ, ಚಂದ್ರಶೇಖರ್, ರಮೇಶ್, ಮಂಜು ಮತ್ತು ಇತರರು ಸಹ ಈ ಸಂದರ್ಭದಲ್ಲಿ ತಮ್ಮ ನೆನಪುಗಳನ್ನು ಹಂಚಿಕೊಂಡು, “ವಿಷ್ಣು ನಮ್ಮ ಹೃದಯಗಳಲ್ಲಿ ಶಾಶ್ವತ” ಡಾ. ವಿಷ್ಣುವರ್ಧನ್ ಅವರ ಜೀವನ ಕೇವಲ ನಟನಾಗಿ ನಿಂತಿರಲಿಲ್ಲ. ಅವರು ಸಮಾಜಸೇವೆ, ಶಿಸ್ತು ಮತ್ತು ಮೌಲ್ಯಗಳ ಪ್ರತಿರೂಪವಾಗಿದ್ದರು. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ – ಇವುಗಳನ್ನು ತಮ್ಮ ಸಿನಿಮಾಗಳ ಮೂಲಕ ವಿಶ್ವಕ್ಕೆ ಪರಿಚಯಿಸಿದರು ಎಂದು ಅಭಿಮಾನಪೂರ್ವಕವಾಗಿ ನುಡಿದರು.