ಮತಗಳ್ಳತನ | ರಾಹುಲ್‌ ಗಾಂಧಿ ಗಂಭೀರ ಆರೋಪ, ಚು. ಆಯುಕ್ತರ ಲಜ್ಜೆಗೇಡಿ ಪ್ರತಿಕ್ರಿಯೆ ಮತ್ತು ತನಿಖೆಯ ತುರ್ತು

Date:

Advertisements
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ರೀತಿ/ಧೋರಣೆಯು ಸರಿಯಾದ ಕ್ರಮವಲ್ಲ. ಬದಲಿಗೆ, ತಜ್ಞರನ್ನು ಒಳಗೊಂಡ ಪಾರದರ್ಶಕ ತನಿಖಾ ತಂಡವನ್ನು ರಚಿಸುವುದು ಚುನಾವಣಾ ಆಯೋಗದ ಮುಂದಿರುವ ಅತೀಮುಖ್ಯ ಮಾರ್ಗ... 

ಮತಗಳ್ಳತನದ ವಿರುದ್ಧದ ಹೋರಾಟವನ್ನು ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಮುಂದುವರೆಸಿದ್ದಾರೆ. ಈ ಹಿಂದೆ, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಕನಿಷ್ಠ 15% ಮತದಾರರು ನಕಲಿ ಎಂಬುದಾಗಿ ಆರೋಪಿಸಿದ್ದ ರಾಹುಲ್‌ ಗಾಂಧಿ, ಗುರುವಾರ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಚುನಾವಣಾ ಆರೋಗದ ವಿರುದ್ಧ ‘ಆಟಂ ಬಾಂಬ್’ ಸಿಡಿಸಿದ್ದಾರೆ. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳ ತೆಗೆದುಹಾಕುವಿಕೆ ಮತ್ತು ನಕಲಿ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಕಲಿ ಲಾಗಿನ್‌ಗಳನ್ನು ಸೃಷ್ಟಿಸಿ, ಆನ್‌ಲೈನ್‌ನಲ್ಲಿ ‘ಫಾರ್ಮ್‌ 7’ಅನ್ನು ನಕಲಿ ಮಾಡಿ, ಮತದಾರರ ಹೆಸರುಗಳನ್ನು ಅಳಿಸಿಹಾಕುವಂತೆ ಯಾರದ್ದೋ ಹೆಸರಿನಲ್ಲಿ ಮತ್ಯಾರೋ ನಕಲಿ ಅರ್ಜಿ ಸಲ್ಲಿಸಿದ್ದಾರೆ. ಇದು ಸಂಘಟಿತ ಕೃತ್ಯ. ಗುರಿಯಾಗಿಸಿಕೊಂಡಿರುವ ಮತದಾರರ ಹೆಸರು ಅಳಿಸಿಹಾಕುತ್ತಿರುವ ‘ಪ್ರಜಾಪ್ರಭುತ್ವ ಕೊಲೆಗಾರ’ರನ್ನು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮತಪಟ್ಟಿಯನ್ನು ತಿರುಚಲು ಸಾಫ್ಟ್‌ವೇರ್‌ಗಳನ್ನು ಬಳಸುವುದು ನಿಜವೆಂದು ಸಾಬೀತಾದರೆ, ರಾಹುಲ್ ಗಾಂಧಿ ಅವರ ‘ವೋಟ್‌ ಚೋರಿ’ ಅಭಿಯಾನವು ಮತ್ತೊಂದು ಹಂತವನ್ನು ತಲುಪಲಿದೆ. ಮತಪಟ್ಟಿ ತಿರುಚುವ ಕೇವಲ ಸಂಘಟಿತ ಪ್ರಯತ್ನದ ವಿರುದ್ಧದ ಹೋರಾಟದಲ್ಲಿ ನಾಗರಿಕರನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಗುರುವಾರ, ರಾಹುಲ್ ಗಾಂಧಿ ವಿವರಿಸಿದ ಹಲವು ವಿಚಾರಗಳಲ್ಲಿ, ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5,990 ಮತದಾರರ ಹೆಸರುಗಳನ್ನು ಕಿತ್ತುಹಾಕಲು ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರದಲ್ಲಿ ನಕಲಿ ಮತದಾರರನ್ನು ಸೇರಿಸಲು ನಕಲಿ ಲಾಗಿನ್‌ಗಳನ್ನು ಸೃಷ್ಟಿಸಿ, ನಕಲಿ ‘ಫಾರ್ಮ್‌-7’ ಮೂಲಕ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದು ಪ್ರಮುಖವಾದವು.

ಆಳಂದದಲ್ಲಿ ಮತದಾರರನ್ನು ಅಳಿಸಲು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅರ್ಜಿಗಳು ನಕಲಿಯಾಗಿವೆ ಎಂದಿರುವ ರಾಹುಲ್ ಗಾಂಧಿ, ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತೋ ಅವರಲ್ಲಿ ಇಬ್ಬರನ್ನು ಪತ್ರಿಕಾಗೋಷ್ಠಿಗೆ ರಾಹುಲ್ ಗಾಂಧಿ ಕರೆತಂದಿದ್ದರು. ಆ ಇಬ್ಬರೂ ‘ತಾವು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ. ತಮ್ಮ ಹೆಸರಿನಲ್ಲಿ ಯಾರೋ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ’ ಎಂಬುದನ್ನು ಸ್ಪಷ್ಟಪಡಿಸಿದರು.

ಆ ಇಬ್ಬರಲ್ಲಿ ಒಬ್ಬರಾದ ಸೂರ್ಯಕಾಂತ್ ಹೆಸರಿನಲ್ಲಿ ಮತದಾರರನ್ನು ಮತಪಟ್ಟಿಯಿಂದ ಬಿಡುವಂತೆ ಕೇವಲ 14 ನಿಮಿಷಗಳಲ್ಲಿ 12 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದನ್ನು ರಾಹುಲ್ ಗಾಂಧಿ ವಿವರಿಸಿದ್ದಾರೆ. ಅಂತೆಯೇ ಮತ್ತೊಬ್ಬ ವ್ಯಕ್ತಿ ನಾಗರಾಜ್ ಅವರು 2023ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ಕೇವಲ 36 ಸೆಕೆಂಡ್‌ಗಳಲ್ಲಿ ಎರಡು ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳನ್ನು ಸಲ್ಲಿಸಲು ನಕಲಿ ದೂರವಾಣಿ ಸಂಖ್ಯೆಗಳನ್ನೂ ಬಳಸಲಾಗಿದೆ. ಆದಾಗ್ಯೂ, ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬುದು ‘ಮತಗಳ್ಳತನ’ ಬಹಿರಂಗವಾಗುವವರೆಗೂ ಈ ಇಬ್ಬರಿಗೂ ಗೊತ್ತೇ ಇರಲಿಲ್ಲ ಎಂಬುದನ್ನು ರಾಹುಲ್ ಗಾಂಧಿ ಒತ್ತಿ ಹೇಳಿದ್ದಾರೆ.

ಭಾರತದಲ್ಲಿ ಮತಗಳು ಮತ್ತು ಮತಪಟ್ಟಿಯನ್ನು ತಿರುಚುವ ಆರೋಪಗಳು ವರದಿಯಾಗಿವೆ. ಆದರೆ, ಈಗ, ಅದರ ಪ್ರಮಾಣ ಅಗಾಧವಾಗಿದೆ. ದೆಹಲಿ ಮೂಲದ ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆಮಾಕ್ರಟಿಕ್ ಸೊಸೈಟೀಸ್’ ನಡೆಸಿದ ಇತ್ತೀಚಿನ ಸಮೀಕ್ಷೆಯು, ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿವೆ ಎಂಬ ಪರಿಕಲ್ಪನೆ ಕುಸಿತಗೊಂಡಿದೆ. ಕಳೆದ 10 ವರ್ಷಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ರೀತಿಯ ಕುರಿತು ಅನುಮಾನ ವ್ಯಕ್ತಪಡಿಸುವವರ ಶೇಕಡಾವಾರು ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ ಎಂದು ಹೇಳಿದೆ.

ಮತದಾರ ಪಟ್ಟಿಯ ತಿರುಚುವಿಕೆ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿದ್ದರೂ, ಚುನಾವಣಾ ಆಯೋಗವು ಮೊಂಡುತನದಿಂದ ಪ್ರತಿಕ್ರಿಯೆ ನೀಡಿದೆ. ಮತದಾರರನ್ನು ಆನ್‌ಲೈನ್‌ನಲ್ಲಿ ಅಳಿಸಲು ಅಥವಾ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ. ಆದರೆ, ರಾಹುಲ್ ಗಾಂಧಿ ಅವರು ಆನ್‌ಲೈನ್‌ ಮೂಲಕ ಮತದಾರರನ್ನು ಅಳಿಸಲಾಗಿದೆ ಎಂಬ ಹೇಳಿಕೆಯೇ ಬದಲಾಗಿದೆ. ಆಳಂದದಲ್ಲಿ ಮತದಾರರ ಪಟ್ಟಿಯನ್ನು ಅಳಿಸಲು ಸಾಮೂಹಿಕ ಅರ್ಜಿಗಳು, ನಕಲಿ ಮೊಬೈಲ್ ಸಂಖ್ಯೆಗಳ ಸ್ಪಷ್ಟ ಬಳಕೆ, ಮತಪಟ್ಟಿಯನ್ನು ತಿರುಚಲು ಸಾಫ್ಟ್‌ವೇರ್‌ ಬಳಕೆ, ನಿಜವಾದ ಮತದಾರರ ಗುರುತುಗಳ ದುರುಪಯೋಗದ ಬಗ್ಗೆ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಈ ಆರೋಪಗಳಿಗೆ ಆಯೋಗವು ಸ್ಪಷ್ಟವಾಗಿ ಉತ್ತರಿಸಿಲ್ಲ.

ಆಳಂದದಲ್ಲಿ ಮತಪಟ್ಟಿಯನ್ನು ಅಳಿಸಿಹಾಕಲು ‘ವಿಫಲ ಪ್ರಯತ್ನಗಳು’ ನಡೆದಿವೆ ಎಂಬುದನ್ನು ಒಪ್ಪಿಕೊಂಡಿರುವ ಆಯೋಗ, ರಾಹುಲ್ ಗಾಂಧಿ ಅವರ ಆರೋಪಗಳನ್ನು ಯಕಶ್ಚಿತಗೊಳಿಸಲು ಯತ್ನಿಸಿದೆ. ಮತ ಕಳ್ಳತನದ ಬಗ್ಗೆ ಚುನಾವಣಾ ಆಯೋಗವೇ ಸ್ವತಃ ಎಫ್‌ಐಆರ್ ದಾಖಲಿಸಿದೆ ಎಂದು ಹೇಳಿಕೊಂಡಿದೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ಮೋಸದ ಜಾಲಕ್ಕೆ ಮತ್ತೆ ಭಾರತ: ಮೋದಿ ಜೊತೆ ಫೋನ್ ಮಾತುಕತೆಯ ಹಿಂದಿನ ಮರ್ಮವೇನು?

ಆಳಂದದಲ್ಲಿ ಮತ ಕಳ್ಳತನವು ಬೆಳಕಿಗೆ ಬಂದದ್ದು, 2023ರ ಫೆಬ್ರವರಿಯಲ್ಲಿ. ಅಂದರೆ, ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ. ಬಿಎಲ್‌ಒ ಒಬ್ಬರ ಸಹೋದರನ ಮತವನ್ನು ಅಳಿಸಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆ ಬಿಎಲ್‌ಒ ಸಹೋದರ ಬಿ.ಆರ್ ಪಾಟೀಲ್ ಅವರ ನಿಕಟವರ್ತಿಯಾಗಿದ್ದ ಕಾರಣ, ಮತ ಕಳ್ಳತನದ ವಿಚಾರ ಬಿ.ಆರ್ ಪಾಟೀಲ್ ಅವರಿಗೆ ಗೊತ್ತಾಯಿತು. ಬಳಿಕ, ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಅವರ ದೂರು ಆಧರಿಸಿ, ಪರಿಶೀಲನೆ ನಡೆಸುವಂತೆ ಕರ್ನಾಟಕ ಚುನಾವಣಾ ಆಯೋಗವು ಸ್ಥಳೀಯ ಚುನಾವಣಾ ಅಧಿಕಾರಿಗೆ (ಜಿಲ್ಲಾಧಿಕಾರಿ) ಸೂಚಿಸಿತು. ಸ್ಥಳೀಯ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬರೋಬ್ಬರಿ 5,994 ಮತಗಳನ್ನು ಅಳಿಸಿಹಾಕಲು ನಕಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಬೆಳಕಿಗೆ ಬಂದಿತು.

ಆದಾಗ್ಯೂ, ತಾವೇ ಸ್ವತಃ ಎಫ್‌ಐಆರ್ ದಾಖಲಿಸಿದ್ದಾಗಿ ಹೇಳಿಕೊಂಡಿರುವ ಆಯೋಗವು, ಆಳಂದ ಮತ ತಿರುಚಿದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 2024ರ ಜನವರಿಯಿಂದ ಈವರೆಗೆ ಆಯೋಗಕ್ಕೆ ಸಿಐಡಿ 18 ಪತ್ರಗಳನ್ನು ಬರೆದಿದೆ. ತನಿಖೆಗಾಗಿ ಡೆಸ್ಟಿನೇಷನ್ ಐಪಿ ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಒದಗಿಸುವಂತೆ ಕೇಳಿದೆ. ಆದರೆ, ಆಯೋಗವು ಅವುಗಳನ್ನೂ ಒದಗಿಸಿಲ್ಲ.

ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಚುನಾವಣೆಯ ಪ್ರಮುಖ ಕೆಲಸ. ಆದರೆ, ಚುನಾವಣೆಗಳು ಮೋಸದಿಂದ ನಡೆಯುತ್ತವೆ. ಚುನಾವಣಾ ಕಣವು ಸಮಾನ ಮೈದಾನವಾಗಿರದೆ, ಒಂದು ಪಕ್ಷದ ಪರವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ, ತನ್ನ ಮೇಲಿನ ಆರೋಪಗಳನ್ನು ತೊಡೆದುಕೊಳ್ಳಲು ಚುನಾವಣಾ ಆಯೋಗ ಮನಸ್ಸು ಮಾಡಬೇಕಿದೆ. ಭಾರತೀಯ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಚುನಾವಣಾ ಆಯೋಗದ ಹೆಗಲ ಮೇಲಿದೆ.

ಅದಕ್ಕಾಗಿ, ಉನ್ನತ ಮಟ್ಟದ ನ್ಯಾಯಾಂಗ ಆಯೋಗ, ಸ್ವತಂತ್ರ ತನಿಖೆ ಅಥವಾ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ತಜ್ಞರನ್ನು ಒಳಗೊಂಡ ಪಾರದರ್ಶಕ ತನಿಖಾ ತಂಡವನ್ನು ರಚಿಸುವುದು ಚುನಾವಣಾ ಆಯೋಗದ ಮುಂದಿರುವ ಅತೀಮುಖ್ಯ ಮಾರ್ಗವಾಗಿದೆ. ಅದನ್ನು ಬಿಟ್ಟು, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ರೀತಿ/ಧೋರಣೆಯು ಸರಿಯಾದ ಮಾರ್ಗವೂ ಅಲ್ಲ. ಉತ್ತಮ ಕ್ರಮವೂ ಅಲ್ಲ. ಅದು, ಆಯೋಗದ ಘನತೆಯನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡುತ್ತದೆಯಷ್ಟೇ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

Download Eedina App Android / iOS

X