ಸರ್ಕಾರವು ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಅಧಿನಿಯಮ-2025 ಜಾರಿಗೆ ತಂದಿರುವುದರಿಂದ ಕುರಿಗಾಹಿ ಸಮುದಾಯದ ದಶಕಗಳ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಸಾಂಪ್ರದಾಯಿಕ ಅಲೆಮಾರಿ ಕುರಿಗಾಯಿಗಳ ಅಧಿನಿಯಮ-2025ರ ಈ ಕಾಯಿದೆಯ ಜಾರಿಯಿಂದ ಕುರಿಗಾಹಿಗಳಿಗೆ ಕಾನೂನುಬದ್ಧ ಭದ್ರತೆ ದೊರೆಯಲಿದೆ. ಸಾಂಪ್ರದಾಯಿಕ ಸಂಚಾರಿ ಜೀವನ ಶೈಲಿ, ವ್ಯಕ್ತಿ ಮತ್ತು ಹಕ್ಕುಗಳಿಗೆ ಸರ್ಕಾರ ಮಾನ್ಯತೆ ನೀಡಿರುವುದು ಕುರಿಗಾಹಿ ವೃತ್ತಿ ಸಮುದಾಯದ ಭವಿಷ್ಯವನ್ನು ಬಲಪಡಿಸುತ್ತದೆ” ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕಾನೂನು ಮಾರ್ಗದರ್ಶನ ಹೋರಾಟಕ್ಕೆ ಮಾಡಿದ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಹಾಗೂ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಿ ಯಶಸ್ವಿಗೆ ತೋರಿದ ಶ್ರಮ, ದೃಢನಿಲುವು ಮತ್ತು ಬದ್ಧತೆಗೆ, ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅವರಿಗೆ ಧನ್ಯವಾದ ಸಲ್ಲಿಸಿದರು.
ವಿಧಾನಸಭೆಯೊಳಗೆ ಕುರಿಗಾಹಿಗಳ ಪರವಾಗಿ ಧ್ವನಿ ಎತ್ತಿ, ಮೀಸಲು ಅರಣ್ಯ ಪ್ರದೇಶಗಳಲ್ಲಿಯೂ ಕುರಿಗಳನ್ನು ಮೇಯಿಸುವ ಹಕ್ಕು ದೊರಕಬೇಕು ಎಂಬ ಮಹತ್ವದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದ ಶಾಸಕ ಬಿ ಬಿ ಚಿಮ್ಮನಕಟ್ಟಿ, ಜೆ ಟಿ ಪಾಟೀಲ ಅವರಿಗೂ ಧನ್ಯವಾದ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೋಟೆಗಂಗೂರು ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಮನವಿ
“ಕುರಿಗಾಹಿಗಳ ಸಂಘಟಿತ ಹೋರಾಟ 2022ರಿಂದ ಪ್ರಾರಂಭವಾಗಿ, ನಂತರ 2025 ಬಾದಾಮಿ ತಾಲೂಕಿನ ಉಗಲವಾಡಿ ಗ್ರಾಮದ ಶರಣಪ್ಪ ಜಮ್ಮನಕಟ್ಟಿ ಕುರಿಗಾಹಿಯ ಹತ್ಯೆಯನ್ನು ಖಂಡಿಸಿ ಮತ್ತು ಕಾಯ್ದೆ ಜಾರಿಗೆ ರಾಜ್ಯಾದ್ಯಂತ ಹೋರಾಟ ಮಾಡಲಾಯಿತು. ಎಲ್ಲ ಕಡೆ ಕುರಿಗಾಹಿಗಳ ಸಂಘಟಿತ ಹೋರಾಟದ ಫಲವಾಗಿ ಈ ಕಾಯ್ದೆ ಜಾರಿಯಾಗಲು ಸಾಧ್ಯವಾಗಿದೆ. ಈ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳು ಮತ್ತು ಕೆಲ ಅಂಶಗಳ ಸೇರ್ಪಡೆಯಾಗಬೇಕಿದೆ. ಮುಂದಿನ ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಜಾರಿ ಮಾಡಬೇಕು” ಎಂದು ಸಿದ್ದರಾಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಧರ್ಮತಿ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಸುವರ್ಣಾ ನಾಗರಾಳ ಇದ್ದರು.