ನಿನ್ನೆ ಸುರಿದ ಭಾರೀ ಮಳೆಯಿಂದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಅನವಾರ ಗ್ರಾಮದ ಬಡ ಕುಟುಂಬವೊಂದು ಬೀದಿಗಿ ಬೀಳುವ ಸ್ಥಿತಿಯಲ್ಲಿದೆ. ಮಳೆಯ ತೀವ್ರತೆಗೆ ಭಾಗಶಃ ಮನೆ ಕುಸಿದು ಬಿದ್ದಿದ್ದು, ಉಳಿದ ಭಾಗದಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ಆತಂಕದಲ್ಲಿರುವ ಬಡ ಕುಟುಂಬ ಪರಿಹಾರ ನಿರೀಕ್ಷಿಸುತ್ತಿದೆ.
ಗ್ರಾಮದ ನಿವಾಸಿಗಳಾದ ಮರಿಯಪ್ಪ, ಮರಿಯಮ್ಮ ದಂಪತಿಯು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇವರು ವಾಸವಾಗಿರುವ ಮನೆ ಮಳೆಯಿಂದ ನೆನೆದು ಕುಸಿದು ಬಿದ್ದಿದೆ. ಇದರಿಂದ ಕುಟುಂಬ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ. ಅಲ್ಲದೆ ಮನೆಯೊಳಗೆ ಮಳೆ ನೀರು ತುಂಬಿಕೊಂಡಿದ್ದು, ದವಸಧಾನ್ಯ ಸೇರಿ ಮನೆಯ ಇತರೆ ಸಾಮಗ್ರಿಗಳು ನೀರು ಪಾಲಾಗಿವೆ.
ಇದನ್ನೂ ಓದಿ: ಯಾದಗಿರಿ | ಸತ್ಯ, ನ್ಯಾಯದ ಪರ ನಿಲ್ಲುವುದೇ ನಿಜವಾದ ಧರ್ಮ
ಈ ಕುರಿತು ಸಾಮಾಜಿಕ ಹೋರಾಟಗಾರ ಶರಣರೆಡ್ಡಿ ಹತ್ತೀಗೂಡುರ್ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿ, ಬಡ ಕುಟುಂಬಕ್ಕೆ ತಕ್ಷಣ ಪರಿಹಾರಧನ, ದವಸಧಾನ್ಯ ವಿತರಣೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.