ನ್ಯಾಯ ವಿಳಂಬವಾದರೆ, ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತಿದೆ. ಆದಾಗ್ಯೂ, ವಿಳಂಬದ ನ್ಯಾಯ ಪಡೆದ ವ್ಯಕ್ತಿಯೊಬ್ಬರು, ತಮ್ಮ ವಿರುದ್ಧದ ಆರೋಪದಿಂದ ಖುಲಾಸೆಗೊಂಡಿದ್ದಾರೆ. 100 ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ, ಆರೋಪಿಯನ್ನು 39 ವರ್ಷಗಳ ಬಳಿಕ ದೋಷಮುಕ್ತನೆಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.
39 ವರ್ಷಗಳ ಹಿಂದೆ (1986ರಲ್ಲಿ), ಮಧ್ಯಪ್ರದೇಶ ರಾಜ್ಯ ಸಾರಿಗೆ ನಿಗಮದ ಮಾಜಿ ಬಿಲ್ಲಿಂಗ್ ಸಹಾಯಕನಾಗಿದ್ದ ಜಾಗೇಶ್ವರ ಪ್ರಸಾದ್ ಅವಸ್ಥಿ ಅವರು 100 ರೂ. ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಆ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು, ಅವರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ 2004ರಲ್ಲಿ ತೀರ್ಪು ನೀಡಿತ್ತು. ಆದರೆ, ಆ ತೀರ್ಪನ್ನು ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಮೂರ್ತಿ ಬಿಭು ದತ್ತ ಗುರು ಅವರಿದ್ದ ಪೀಠವು ರದ್ದುಗೊಳಿಸಿದೆ. ಪ್ರಕರಣದಲ್ಲಿ ನಿರ್ದಿಷ್ಟವಾದ ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ.
1986ರಲ್ಲಿ ಅವಸ್ಥಿ ಅವರು ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಕುಮಾರ್ ವರ್ಮಾ ಅವರ ವೇತನ ಬಾಕಿ ಪಾವತಿಸಲು 100 ರೂಪಾಯಿ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿತ್ತು. ಅಶೋಕ್ ವರ್ಮಾ ನೀಡಿದ ದೂರಿನ ಆಧಾರದ ಮೇಲೆ, ಆಗಿನ ಲೋಕಾಯುಕ್ತರು ‘ಫಿನಾಲ್ಫ್ಥಲೀನ್’ ಲೇಪಿತ ನೋಟುಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದರು. ಆ ನೋಟನ್ನು ಲಂಚವಾಗಿ ಸ್ವೀಕರಿಸಿದ್ದ ಅವಸ್ಥಿ, ನೋಟುಗಳೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿತ್ತು.
ಆದಾಗ್ಯೂ, ಪ್ರಕರಣದಲ್ಲಿ ಗಂಭೀರ ಅಂತರವಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಅವಸ್ಥಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದನ್ನು ಸಾಬೀತು ಮಾಡಲು ಯಾವುದೇ ಸ್ವತಂತ್ರ ಸಾಕ್ಷಿ ಇಲ್ಲ. ‘ಸ್ಯಾಡೋ ಸಾಕ್ಷಿ’ಯು ಅವಸ್ಥಿ ಮತ್ತು ದೂರುದಾರನ ಸಂಭಾಷಣೆಯನ್ನು ಆಲಿಸಿಲ್ಲ ಅಥವಾ ಹಣ ಸ್ವೀಕರಿಸುವುದನ್ನು ನೋಡಿಲ್ಲ. ಸರ್ಕಾರಿ ಸಾಕ್ಷಿಗಳು 20-25 ಗಜಗಳ ದೂರದಲ್ಲಿ ನಿಂತಿದ್ದರು. ಇದರಿಂದಾಗಿ ಅವರಾರು ಅವಸ್ಥಿ-ವರ್ಮಾ ನಡುವಿನ ವಹಿವಾಟನ್ನು ಗಮನಿಸಲು ಸಾಧ್ಯವಾಗಲಿಲ್ಲ; ಮತ್ತು ಮುಖ್ಯವಾಗಿ, ಅವಸ್ಥಿ ಅವರಿಂದ ವಶಪಡಿಸಿಕೊಂಡ ಲಂಚದ ಹಣವು 100 ರೂ. ಮುಖಬೆಲೆಯ ಒಂದೇ ನೋಟು ಅಥವಾ 50 ರೂ. ಮುಖಬೆಲೆಯ ಎರಡು ನೋಟುಗಳನ್ನು ಒಳಗೊಂಡಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಮೋಸದ ಜಾಲಕ್ಕೆ ಮತ್ತೆ ಭಾರತ: ಮೋದಿ ಜೊತೆ ಫೋನ್ ಮಾತುಕತೆಯ ಹಿಂದಿನ ಮರ್ಮವೇನು?
“ಆಪಾದಿತ ಘಟನೆಯ ಸಮಯದಲ್ಲಿ, ಅವಸ್ಥಿ ಅವರು ಬಿಲ್ ಪಾವತಿಯನ್ನು ಅಂಗೀಕರಿಸುವ ಅಧಿಕಾರ ಹೊಂದಿರಲಿಲ್ಲ. ದೂರು ದಾಖಲಾದ ಒಂದು ತಿಂಗಳ ನಂತರವೇ ಅವರು ಅಂತಹ ಅಧಿಕಾರವನ್ನು ಪಡೆದರು” ಎಂದು ಅವಸ್ಥಿ ಪರ ವಕೀಲರು ವಾದಿಸಿದ್ದಾರೆ.
ಅವರ ವಾದವನ್ನು ಆಲಿಸಿದ ನ್ಯಾಯಾಲಯವು, “ಕಲುಷಿತ ನೋಟುಗಳನ್ನು ಹಿಂಪಡೆಯುವುದರಿಂದ ಉದ್ದೇಶ ಮತ್ತು ಬೇಡಿಕೆಯ ಪುರಾವೆಗಳಿಲ್ಲದೆ ಅಪರಾಧವನ್ನು ದೃಢಪಡಿಸಲು ಸಾಧ್ಯವಿಲ್ಲ ಸ್ಥಾಪಿಸಲು ಸಾಧ್ಯವಿಲ್ಲ” ಎಂದು ಒಪ್ಪಿಕೊಂಡಿತು.
ಇದೀಗ, ಸುಮಾರು ನಾಲ್ಕು ದಶಕಗಳ ನಂತರ, ಜಾಗೇಶ್ವರ್ ಪ್ರಸಾದ್ ಅವಸ್ಥಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದಾರೆ. ಇದು ದೀರ್ಘಕಾಲದ ಮೊಕದ್ದಮೆಯ ನ್ಯೂನತೆಗಳು ಮತ್ತು ನ್ಯಾಯದ ಸ್ಥಿತಿಸ್ಥಾಪಕತ್ವ ಎರಡನ್ನೂ ಎತ್ತಿ ತೋರಿಸುವ ಅಪರೂಪದ ಪ್ರಕರಣವಾಗಿದೆ.