ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ ಪುಷ್ಪಾರ್ಚನೆ ಮಾಡಿಸಿಕೊಳ್ಳಲು ಒಲ್ಲೆ ಎನ್ನುವಳೇ? ಯತ್ನಾಳ್ ಹೇಳಿರುವ ಆ ನಿಯಮ ಮಾಡಿದವರು ಯಾರು? ದಲಿತರ ವೋಟು ಬೇಡ ಎಂದು ಯತ್ನಾಳ್ ಹೇಳುವರೇ? ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಬಿಜೆಪಿ ಯಾವ ವಿಚಾರದಲ್ಲಿ ಎಲ್ಲ ಹಿಂದೂಗಳನ್ನು ಒಂದಾಗಿ ಕಂಡಿದೆ ಎಂಬ ಬಗೆಗೆ ಆತ್ಮಮಂಥನ ಮಾಡಿಕೊಳ್ಳಬೇಕಿದೆ.
ಬಿಜೆಪಿ ಮತ್ತು ಸಂಘಪರಿವಾರದ ಬಹುತೇಕ ಹೇಳಿಕೆಗಳು ಮನುಷ್ಯವಿರೋಧಿ ಮನುವಾದಿ ಸಿದ್ಧಾಂತದ ಮುಂದುವರಿಕೆ. ಧರ್ಮ ಧರ್ಮಗಳ ನಡುವೆ ಭೇದ ಮಾತ್ರವಲ್ಲ, ಹಿಂದೂ ನಾವೆಲ್ಲ ಒಂದು ಎಂದು ಹೇಳುತ್ತಲೇ ದಲಿತರನ್ನು ಧರ್ಮದಿಂದ ಆಚೆ ಇಡುವ ಆದರೆ ಅದೇ ಸಂದರ್ಭದಲ್ಲಿ ತಾನು ಹೂಡುವ ಅಧರ್ಮ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿಕೊಳ್ಳುವ ಮೇಲ್ವರ್ಗ ಹೆಣೆದ ಹುನ್ನಾರ. ಈ ಹುನ್ನಾರದ ಬಲೆಗೆ ಬಿದ್ದ ಸಿ ಟಿ ರವಿ, ಬಸನಗೌಡ ಯತ್ನಾಳ್ ಮಾತ್ರವಲ್ಲ ಪ್ರತಾಪ್ ಸಿಂಹ ತರಹದ ಹೊಸ ತಲೆಮಾರಿನ ಬಿಜೆಪಿ ಶೂದ್ರರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಗಣೇಶೋತ್ಸವದಂತಹ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್, ನಾಡದೇವಿ ಚಾಮುಂಡೇಶ್ವರಿಗೆ ಹೂ ಹಾಕಿ ದಸರಾ ಉದ್ಘಾಟಿಸುವ ಕಾರ್ಯವನ್ನು ಸನಾತನ ಧರ್ಮದವರು ಮಾತ್ರ ಮಾಡಬೇಕು. ದಲಿತ ಮಹಿಳೆಗೆ ಕೂಡಾ ಆ ಹಕ್ಕು ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದು ಅವರಲ್ಲಿರುವ ಮುಸ್ಲಿಂ ದ್ವೇಷದ ಜೊತೆ ಜೊತೆಗೆ ದಲಿತರ ಮೇಲಿನ ತಿರಸ್ಕಾರವನ್ನೂ ಬಹಿರಂಗಪಡಿಸಿದೆ. ಬಿಜೆಪಿಯ ಬಹುತೇಕ ನಾಯಕರ ಅಸಲಿ ಮನಸ್ಥಿತಿ ಇದೇ ಆಗಿದೆ. ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ ಪುಷ್ಪಾರ್ಚನೆ ಮಾಡಿಸಿಕೊಳ್ಳಲು ಒಲ್ಲೆ ಎನ್ನುವಳೇ? ಯತ್ನಾಳ್ ಹೇಳಿರುವ ಆ ನಿಯಮ ಮಾಡಿದವರು ಯಾರು? ದಲಿತರ ವೋಟು ಬೇಡ ಎಂದು ಯತ್ನಾಳ್ ಹೇಳುವರೇ? ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಬಿಜೆಪಿ ಯಾವ ವಿಚಾರದಲ್ಲಿ ಎಲ್ಲ ಹಿಂದೂಗಳನ್ನು ಒಂದಾಗಿ ಕಂಡಿದೆ ಎಂಬ ಬಗೆಗೆ ಆತ್ಮಮಂಥನ ಮಾಡಿಕೊಳ್ಳಬೇಕಿದೆ.
ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಆ ಪಕ್ಷ ಅಳವಡಿಸಿಕೊಂಡಿರುವ ಸನಾತನ, ಮನುವಾದಿ ಮನಸ್ಥಿತಿಯ ಪರಿಣಾಮ ನೇರಾನೇರ ಸಮಾಜದ ಮೇಲೆ ಆಗುತ್ತಿದೆ. ಧರ್ಮ ಮತ್ತು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಕೋಮು ದ್ವೇಷದ ವಿಷಬೀಜಗಳನ್ನು ಬಿತ್ತುವ ನಾಯಕರಿವರು. ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಬಿಜೆಪಿಯ ಹಿಂದುತ್ವ ರಾಜಕಾರಣದಲ್ಲಿ ದಲಿತರು ಒಳಗೊಳ್ಳುವರೇ? ಸಮಾನ ಅವಕಾಶ- ಅಧಿಕಾರ ಪಡೆಯುವರೇ ಎಂಬ ಪ್ರಶ್ನೆಗೆ ಉತ್ತರವಿದೆಯೇ? ದಲಿತರಿಗೆ ಪಕ್ಷದಲ್ಲಿ ಉನ್ನತ ಹುದ್ದೆ, ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ, ಪ್ರಧಾನಮಂತ್ರಿ ಸ್ಥಾನವನ್ನು ಮುಕ್ತ ಮನಸ್ಸಿನಿಂದ ನೀಡುವರೇ? ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕಾಂಗ್ರೆಸ್‌ನಲ್ಲಿ ಮಾತ್ರ ಆಗಾಗ ಕೇಳಿಸುತ್ತಿದೆ. ಆಗ ಬಿಜೆಪಿ ನಾಯಕರು ಕಾಂಗ್ರೆಸ್ ನ ಕಾಲೆಳೆಯುತ್ತಾರೆ. ಆದರೆ, ತಮ್ಮ ಪಕ್ಷದಿಂದ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂಬ ದೂರ ದೂರದ ಹೇಳಿಕೆಯೂ ಇದುವರೆಗೆ ಬಂದಿಲ್ಲ. ಅಷ್ಟೇ ಅಲ್ಲ, ದಲಿತರೊಬ್ಬರು ಬಿಜೆಪಿಯ ಅಧ್ಯಕ್ಷ ಪದವಿಗೆ ಏರುವುದು ಕನಸಿನ ಮಾತೇ ಸರಿ. ಇನ್ನು ಮಹಿಳೆಯನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಸ್ತ್ರೀಯರಿಗೆ ಸಮಾನತೆ, ಸಮಾನ ಅವಕಾಶ, ಅಧಿಕಾರ, ಸ್ವಾತಂತ್ರ್ಯ ಎಲ್ಲವನ್ನೂ ನಿರಾಕರಿಸುವ, ಹೆಣ್ಣೆಂದರೆ ಗಂಡಿನ ಚಾಕರಿ ಮಾಡುತ್ತ ಎರಡನೇ ದರ್ಜೆಯ ಮನುಷ್ಯಳಾಗಿ ಬಿದ್ದಿರಬೇಕು ಎಂಬ ಮನುವಾದಿ ಸಿದ್ಧಾಂತವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಪೋಷಿಸುತ್ತಾ ಬಂದಿದೆ. ಈ ಜೀವವಿರೋಧಿ ಅನೀತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಅದರ ಪರಿಣಾಮವಾಗಿ ಯತ್ನಾಳ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ದಲಿತ ನಾಯಕರನ್ನೂ ಬಿಜೆಪಿಯ ನಾಯಕರು ಸಹಿಸುತ್ತಿಲ್ಲ ಎಂಬುದಕ್ಕೆ ಇತ್ತೀಚೆಗೆ ದಲಿತ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಘಪರಿವಾರದ ಬಾಡಿಗೆ ಭಾಷಣಕಾರರು ಮತ್ತು ಬಿಜೆಪಿ ನಾಯಕರು ನೀಡುತ್ತಿರುವ ದ್ವೇಷಪೂರಿತ ದಲಿತವಿರೋಧಿ ಹೇಳಿಕೆಗಳೇ ಸಾಕ್ಷಿ. ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕಾನ್ವೆಂಟ್ ದಲಿತ ಎಂದು ಕರೆದಿರುವುದೇ ಅಲ್ಲದೆ, ಬಗೆ ಬಗೆಯಾಗಿ ನಿಂದಿಸುತ್ತಿದ್ದಾರೆ.
ಇದನ್ನೂ ಓದಿ ಮೋದಿ ಸರ್ಕಾರದ ಅದಾನಿ ಪರ ನೀತಿಗಳು: ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿರುವ ಕಪ್ಪು ಚುಕ್ಕೆಗಳು
ಯತ್ನಾಳ್ ವಿರುದ್ಧ ದಲಿತ ನಿಂದನೆಯ ದೂರು ದಾಖಲಾಗಿದೆ. ತಮ್ಮ ಮೇಲಿನ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೇಳಿದೆ. ಈ ಹಿಂದಿನ ದ್ವೇಷ ಭಾಷಣ ಪ್ರಕರಣಗಳಲ್ಲಿಯೂ ಕೋರ್ಟ್ ಹೀಗೇ ಹೇಳಿದೆ. ಯತ್ನಾಳ್, ಪ್ರತಾಪ್ ಸಿಂಹ, ಸಿ ಟಿ ರವಿ ತರಹದವರಿಗೆ ಸಾಮಾಜಿಕ ಶಾಂತಿ ಕದಡುವ ಹೇಳಿಕೆ, ಮುಸ್ಲಿಮರ ವಿರುದ್ಧ ಅವಮಾನಕರ ಹೇಳಿಕೆ ನೀಡುವುದು, ಹಿಂಸೆಗೆ ಪ್ರಚೋದಿಸುವುದು, ಕೈ ಕಡಿತೇವೆ, ತಲೆ ತೆಗಿತೇವೆ ಎನ್ನುವುದು ನಿತ್ಯದ ಚಾಳಿಯಾಗಿ ಹೋಗಿದೆ. ಹೀಗೆ ಹೇಳಿಕೆ ನೀಡುವವರಿಗೇ ಬಿಜೆಪಿಯಲ್ಲಿ ಪದಾಧಿಕಾರಿ ಪದವಿಗಳು, ಸರ್ಕಾರಗಳಲ್ಲಿ ಸಚಿವ ಹುದ್ದೆಗಳ ಬಹುಮಾನಗಳು ಗಿಟ್ಟುತ್ತಿವೆ. ಈ ಸಮಾಜವಿರೋಧಿ ಪ್ರವೃತ್ತಿಯನ್ನು ನ್ಯಾಯಾಂಗ ಉಕ್ಕಿನ ಹಸ್ತಗಳಿಂದ ಹತ್ತಿಕ್ಕಬೇಕಿದೆ. ಕೋರ್ಟ್‌ಗಳು ಕಠಿಣ ಕ್ರಮ ಜರುಗಿಸಿದರೆ, ಜನಪ್ರತಿನಿಧಿಗಳ ಮಣಿಕಟ್ಟಿನ ಮೇಲೆ ಬಾರಿಸಿ ಜವಾಬ್ದಾರಿ ನೆನಪಿಸಿದರಷ್ಟೇ ಇಂತಹ ಸಾಮಾಜಿಕ ಶಾಂತಿ ಸೌಹಾರ್ದ ಕದಡುವ ಹೇಳಿಕೆಗಳಿಗೆ ಕಡಿವಾಣ ಬೀಳಲಿದೆ.
