ಬೆಳಗಾವಿ | ರೈತರ ಹೋರಾಟಕ್ಕೆ ಐತಿಹಾಸಿಕ ಜಯ: ಎಪಿಎಂಸಿ ಮಾರುಕಟ್ಟೆಗೆ ಹೊಸ ಭರವಸೆ

Date:

Advertisements

ರಾಜ್ಯದ ಎರಡನೇ ಅತಿದೊಡ್ಡ ಕೃಷಿ ಮಾರುಕಟ್ಟೆಯಾದ ಬೆಳಗಾವಿ ಎಪಿಎಂಸಿ ಮಾರುಕಟ್ಟೆ 2019ರಲ್ಲಿ ಕಾರ್ಯಾರಂಭ ಮಾಡಿತ್ತು. ಆದರೆ ನಂತರ ಅಕ್ರಮವಾಗಿ ನಿರ್ಮಿತವಾದ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಕಾರಣದಿಂದ ಇಲ್ಲಿ ವ್ಯಾಪಾರವೇ ಕುಗ್ಗಿ ಹೋಯಿತು.

ಈ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ರೈತ ಸಂಘಟನೆಗಳು ಖಾಸಗಿ ಮಾರುಕಟ್ಟೆಯನ್ನು ಮುಚ್ಚುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಸುತ್ತ ಬಂದಿದ್ದವು. ಇದೀಗ ರೈತರ ಹೋರಾಟ ಫಲಿಸಿದೆ. ಕೃಷಿ ಮಾರುಕಟ್ಟೆ ಇಲಾಖೆ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ವ್ಯಾಪಾರ ಪರವಾನಗಿ(ಟ್ರೇಡ್ ಲೈಸೆನ್ಸ್‌)ಯನ್ನು ರದ್ದುಪಡಿಸಿದೆ. ಇದರೊಂದಿಗೆ ಎಪಿಎಂಸಿ ಮಾರುಕಟ್ಟೆಯ ಭವಿಷ್ಯಕ್ಕೆ ಹೊಸ ಬಾಗಿಲು ತೆರೆದಂತಾಗಿದೆ.

ರೈತ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿ, ಇದು ರೈತರ ಹಕ್ಕು ಹಾಗೂ ಹೋರಾಟದ ಶಕ್ತಿ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಪಿಎಂಸಿ ಕಾಯ್ದೆಯ ತಿದ್ದುಪಡಿಯ ನಂತರ 2022ರಲ್ಲಿ ಬೆಳಗಾವಿ ನಗರದಲ್ಲಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆ ನಿರ್ಮಾಣವಾಯಿತು. ಇದರ ಪರಿಣಾಮವಾಗಿ ₹110 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರ ಕುಗ್ಗಿ ಸರ್ಕಾರಕ್ಕೆ ಬರುತ್ತಿದ್ದ ಆದಾಯದಲ್ಲೂ ಕುಸಿತ ಉಂಟಾಯಿತು ಹಾಗೂ ಎಪಿಎಂಸಿ ವರ್ತಕರು ವ್ಯಾಪಾರಿಗಳು ನಷ್ಟಕ್ಕೆ ಒಳಗಾದರು.

ಬೆಳಗಾವಿ ಎಪಿಎಂಸಿ ಮಾರುಕಟ್ಟೆ 1

ಜೈ ಕಿಸಾನ್ ಮಾರುಕಟ್ಟೆಯ ನಿರ್ಮಾಣವು ನ್ಯಾಯಸಮ್ಮತವಾಗಿಲ್ಲದೆ ನಡೆದಿತ್ತೆಂದು ರೈತ ಸಂಘಟನೆಗಳು ಆರೋಪ ಮಾಡಿದ್ದವು. ಅಲ್ಲದೆ ಆ ಮಾರುಕಟ್ಟೆಯಲ್ಲಿ ರೈತರಿಂದ ಅನಧಿಕೃತ ಶುಲ್ಕ ವಸೂಲಿ, ತೂಕದಲ್ಲಿ ಮೋಸ, ತರಕಾರಿ ಬೆಳೆಗಳಿಗೆ ಸರಿಯಾದ ಬೆಲೆ ನೀಡದಿರುವುದು ಸೇರಿದಂತೆ ಹಲವು ಅವ್ಯವಹಾರಗಳು ನಡೆದಿವೆ ಎಂಬ ದೂರುಗಳು ವ್ಯಕ್ತವಾದವು.

ಭಾರತೀಯ ಕೃಷಿಕ ಸಮಾಜದ ಸಂಘಟನೆಯ ಅಧ್ಯಕ್ಷ ಸಿದ್ದಗೌಡ ಮೋದಗಿಯವರು ಹಾಗೂ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಸ್ಥರು ಜಿಲ್ಲೆಯ ರೈತ ಮತ್ತು ಪ್ರಗತಿಪರ ಸಂಘಟನೆಗಳು ಜೈ ಕಿಸಾನ್ ಮಾರುಕಟ್ಪೆಯ ಅವ್ಯವಹಾರಗಳ ವಿರುದ್ಧ ಧ್ವನಿ ಎತ್ತಿ, ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ಹೋರಾಟಕ್ಕೆ ರಾಜ್ಯದ 47ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ನೀಡಿದ್ದವು. ಅಷ್ಟೆ ಅಲ್ಲದೆ ಅಮರಣ ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದರು.

ಬೆಳಗಾವಿ ಜಿಲ್ಲೆಯ ರೈತರ ಈ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯೂ ಬೆಂಬಲ ನೀಡಿತು. ನಿರಂತರವಾಗಿ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತ ಬಂದಿದ್ದು, ಸಿದ್ಧಗೌಡ ಮೋದಗಿಯವರು ಕಾನೂನು ಹೋರಾಟಕ್ಕೂ ಇಳಿದು ಸೂಕ್ತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.

ರೈತರ ಒತ್ತಡಕ್ಕೆ ತಲೆಬಾಗಿದ ಸರ್ಕಾರವು 2024ರಲ್ಲಿ ಕೃಷಿ ಮಾರಾಟ ಇಲಾಖೆಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಇದು ರೈತ ಸಂಘಟನೆಗಳಿಗೆ ಸಿಕ್ಕ ಮೊದಲ ಜಯವಾಗಿತ್ತು. ಆದರೆ ಸಮಿತಿ ರಚನೆಯ ನಂತರವೂ ರೈತ ಸಂಘಟನೆಗಳು ಹಾಗೂ ಎಪಿಎಂಸಿ ಸಗಟು ವ್ಯಾಪಾರಸ್ಥರು ಪ್ರತಿಭಟನೆ ಮುಂದುವರೆಸಿದರು.

ಬೆಳಗಾವಿ ಎಪಿಎಂಸಿ ಮಾರುಕಟ್ಟೆ 2

ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ, ಜೈ ಕಿಸಾನ್ ಮಾರುಕಟ್ಟೆಯು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಪತ್ತೆಯಾಯಿತು.

2025ರ ಫೆಬ್ರವರಿ 14ರಂದು ಭೂ ಪರಿವರ್ತನೆ ಪರವಾನಗಿ ಆದೇಶ ರದ್ದತಿ ಬಗ್ಗೆ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಗೆ ಶೋಕಾಸ್ ನೋಟಿಸ್ ನೀಡಲಾಯಿತು. ಹಾಗೂ ಬೆಳಗಾವಿ ನಗರಾಭಿವೃದ್ಧ ಪ್ರಾಧಿಕಾರದಿಂದ ಆಗಸ್ಟ್ 25ರಂದು ಜೈ ಕಿಸಾನ್ ಮಾರುಕಟ್ಟೆಯ ಭೂ ಪರಿವರ್ತನೆ ಆದೇಶ ರದ್ದು ಮಾಡಿತು. ಈ ಮೂಲಕ ರೈತ ಸಂಘಟನೆಗಳಿಗೆ ಈ ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಂತಾಯಿತು.

ರೈತ ಸಂಘಟನೆಗಳಿಂದ ಬಂದ ಮನವಿಗಳು, ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳ ತನಿಖಾ ವರದಿ, ವಿಭಾಗೀಯ ಹೆಚ್ಚುವರಿ ನಿರ್ದೇಶಕರು ಮತ್ತು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರಿಂದ ಸಲ್ಲಿಸಲ್ಪಟ್ಟ ಪರಿಶೀಲನಾ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲೈಸೆನ್ಸ್ ನಿಬಂಧನೆಗಳನ್ನು ಪಾಲಿಸದಿರುವುದು ಹಾಗೂ ರೈತರ ಹಿತಾಸಕ್ತಿ ಕಡೆಗಣಿಸಿರುವುದು ಬಹಿರಂಗವಾಯಿತು.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 72-ಡಿ ಅಡಿಯಲ್ಲಿ ಸರ್ಕಾರ ತನ್ನ ಅಧಿಕಾರವನ್ನು ಬಳಸಿ, 2021ರ ನವೆಂಬರ್‌ 16ರಂದು ನೀಡಿದ ಲೈಸೆನ್ಸ್‌ ರದ್ದುಪಡಿಸಲು ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿದರು.

ಭಾರತೀಯ ಕೃಷಿಕ ಸಮಾಜ ಸಂಘಟನೆಯ ಅಧ್ಯಕ್ಷ ಸಿದ್ದಗೌಡ ಮೋದಗಿ

ಈ ನಿರ್ಧಾರ ರೈತರ ದೀರ್ಘ ಹೋರಾಟಕ್ಕೆ ಮಹತ್ವದ ಜಯ ತಂದುಕೊಟ್ಟಿದ್ದು, ರೈತ ಸಂಘಟನೆಗಳು ಇದನ್ನು ಐತಿಹಾಸಿಕ ಕ್ಷಣವೆಂದು ವರ್ಣಿಸಿವೆ.

ಈ ಕುರಿತು ಈ ದಿನ.ಕಾಮ್ ಮಾಧ್ಯಮದ ಜತೆ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೊದಗಿ ಮಾತನಾಡಿ ಮೂರು-ನಾಲ್ಕು ವರ್ಷಗಳಿಂದ ಜೈ ಕಿಸಾನ್ ಹೋಲ್‌ಸೇಲ್ ವೆಜಿಟೇಬಲ್ ಮರ್ಚೆಂಟ್ ಅಸೋಸಿಯೇಷನ್ ನಡೆಸುತ್ತಿದ್ದ ಖಾಸಗಿ ಮಾರುಕಟ್ಟೆಯ ವಿರುದ್ಧ ರೈತ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರವು ಮಾರುಕಟ್ಟೆಯ ಲೈಸೆನ್ಸ್‌ ರದ್ದುಪಡಿಸಿದ್ದು, ರೈತರು ಇದನ್ನು ತಮ್ಮ ಹೋರಾಟದ ಮಹತ್ವದ ಗೆಲುವೆಂದು ಕಂಡಿದ್ದಾರೆ.

ಆದರೆ, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆ ವಿವಾದಕ್ಕೆ ಕಾರಣವಾಗಿದೆ. ಲೈಸೆನ್ಸ್ ರದ್ದುಗೊಳಿಸುವ ಆದೇಶದಲ್ಲಿ ಮಾರುಕಟ್ಟೆಯನ್ನು ತಕ್ಷಣ ಸೀಜ್ ಮಾಡಬೇಕೆಂದು ಉಲ್ಲೇಖವಿದ್ದರೂ, ಜಿಲ್ಲಾಧಿಕಾರಿಗಳು ಮಾರುಕಟ್ಟೆಯ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ʼಪ್ಲಾನ್ ಬಿʼ ಕಲ್ಪಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ʼಅಧಿಕಾರಿಗಳು ಹಿಂದೆಯೇ ಲೈಸೆನ್ಸ್ ರದ್ದುಗೊಳಿಸಬೇಕಾಗಿತ್ತು. ಆದರೆ ಅದನ್ನು ಮಾಡದೆ, ಈಗಲೂ ತಕ್ಷಣ ಸೀಜ್ ಮಾಡುವ ಬದಲು ಮಾರುಕಟ್ಟೆಯವರ ಹತ್ತಿರ ಹೋಗಿ ಮನವಿ ಮಾಡುವುದು ಸರಿಯಲ್ಲʼ ಎಂದು ಅರ್ಜಿದಾರ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೊದಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ : ಲಿಂಗಾಯತರು ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿ : ಬಸವರಾಜ ರೊಟ್ಟಿ

ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ರೈತರ ಕಾನೂನು ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಬಲ ತುಂಬಿದ ಹಿನ್ನೆಲೆಯಲ್ಲಿ, ರೈತರು ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಕುರಿತು ಎಪಿಎಂಸಿ ಮಾರುಕಟ್ಟೆಯ ವ್ಯಾಪರಸ್ಥರ ಸಂಘಟನೆಯ ಮುಖಂಡರಾದ ಸತೀಶ ಪಾಟೀಲ ಈ ದಿನ.ಕಾಮ್ ಜತೆ ಮಾತನಾಡಿ‌, “ರೈತ ಸಂಘಟನೆಯ ಮುಖಂಡ ಸಿದ್ದಗೌಡ ಮೊದಗಿಯವರ ಹೋರಾಟ ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಜಯಸಿಕ್ಕಿದೆ ಈ ಮೂಲಕ ರೈತರಿಗೆ ಅನುಕೂಲವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೈ ಕಿಸಾನ್ ಮಾರುಕಟ್ಟೆ ಲೈಸೆನ್ಸ್ ರದ್ದಾಗಿರುವುದು ಎಪಿಎಂಸಿ ಮಾರುಕಟ್ಟೆಗೆ ಹೊಸ ಜೀವ ತುಂಬಿದಂತೆ. ಆದರೆ ಮುಂದೆ ಇದೇ ತಪ್ಪುಗಳು ಮರುಕಳಿಸದಂತೆ ಸರ್ಕಾರವು ಪಾರದರ್ಶಕತೆ, ಕಟ್ಟುನಿಟ್ಟಿನ ನಿಯಂತ್ರಣ ಮತ್ತು ರೈತರ ಹಿತಾಸಕ್ತಿಯನ್ನು ಅಗ್ರಸ್ಥಾನದಲ್ಲಿ ಇಡುವುದು ಅವಶ್ಯಕವಾಗಿದೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

Download Eedina App Android / iOS

X