ಬುರ್ಖಾ ಧರಿಸಿದ್ದ ಮಹಿಳೆಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿರುವ ಕೋಮುದ್ವೇಷ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಖಾಸಗಿ ಬಸ್ ಸಂಸ್ಥೆ ಮತ್ತು ಇಬ್ಬರು ನಿರ್ವಾಹಕರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಘಟನೆಯು ತಮಿಳುನಾಡಿನ ತಿರುಚಂಡೂರ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಾಯಲಗ ಪಟ್ಟಿಣಂನಿಂದ ತೂತ್ತುಕೂಡಿಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಮಹಿಳೆ, ಮಹಿಳೆ ಹತ್ತಲು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆ ವೇಳೆ, ಆಕೆಗೆ ಬಸ್‌ನಲ್ಲಿ ನಿರ್ವಾಹಕರು ಪ್ರವೇಶ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಬಸ್‌ನ ಮಾಲೀಕ ಸಂಸ್ಥೆ ‘ವಿವಿಎಸ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಮತ್ತು ಬಸ್‌ನಲ್ಲಿದ್ದ ಇಬ್ಬರ ನಿರ್ವಾಹಕರ ಪರವಾನಗಿಯನ್ನು ತಮಿಳುನಾಡು ರಾಜ್ಯ ಸಾರಿಗೆ ನಿಗಮ ರದ್ದುಗೊಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ; ‘ಬಸ್ ಹತ್ತಲು ಯಾಕೆ ಆಕೆಗೆ ಅವಕಾಶ ನೀಡುತ್ತಿಲ್ಲ’ ಎಂದು ಓರ್ವ ವ್ಯಕ್ತಿ ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ನಿರ್ವಾಹಕ, ‘ನಿಮಗೆ ಬಸ್ ಹತ್ತಲು ಅವಕಾಶ ಕೊಡಬಾರದೆಂದು ಬಸ್ ಮಾಲೀಕರು ನಿರ್ದೇಶಿಸಿದ್ದಾರೆ’ ಎಂದು ಮಾತನಾಡಿರುವುದು ಮತ್ತು ಬಸ್ ಮಾಲೀಕನ ಮೊಬೈಲ್ ಸಂಖ್ಯೆಯನ್ನು ಪ್ರಶ್ನಿಸಿದ ವ್ಯಕ್ತಿಗೆ ನೀಡಿರುವುದು ಕಂಡುಬಂದಿದೆ.