ಯಾವುದೇ ಕ್ಷೇತ್ರದಲ್ಲೂ ಬರೆಯುವಂತವರು ಬರೆಯುತ್ತ ಹೋಗಬೇಕು ಅಧ್ಯಯನ ಮತ್ತು ಅಭಿವ್ಯಕ್ತಿ ಈ ಎರಡು ಒಟ್ಟಿಗೆ ಸಾಗಿದರೆ ನಮ್ಮ ಶಕ್ತಿ ಮತ್ತು ನಮ್ಮ ಮಿತಿಯು ಗೊತ್ತಾಗುತ್ತದೆ. ಯಾವುದೇ ಬರಹಗಾರ ತನ್ನ ತನ್ನ ಮಿತಿಯನ್ನು ಅರ್ಥಮಾಡಿಕೊಳ್ಳದೆ ಹೋದರೆ ಬೆಳೆಯಲಿಕ್ಕೆ ಸಾಧ್ಯವಿಲ್ಲ ಹಾಗಾಗಿ ಓದು ಎನ್ನುವುದು ಬಹಳ ಮಖ್ಯವಾದುದು ಎಂದು ಹಿರಿಯ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
ಅವರು ಉಡುಪಿ ಜಿಲ್ಲೆಯ ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ಉಡುಪಿ ಹಾಗೂ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಿಗಾಗಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಓದು ಎನ್ನುವುದೇ ವೈವಿದ್ಯಮಯವಾದುದ್ದು, ಎಲ್ಲರ ಓದು ಒಂದೇ ರೀತಿ ಇರುವುದಕ್ಕೆ ಸಾಧ್ಯವಿಲ್ಲ, ಆದರೆ ಓದಿಗೆ ಇರುವ ವಿವಿಧತೆಯನ್ನು ಸಹ ನಾವು ಗಮನಿಸಬೇಕು, ಹಾಗೇ ಓದಿಗೆ ಇರುವ ವಿವಿಧತೆಯನ್ನು ಗಮನಿಸಿಕೊಂಡು ಬಂದಾಗ ಯಾವುದೇ ಓದು ಪೂರ್ವಗ್ರಹ ಪೀಡಿತವಿಲ್ಲದ ಓದಾಗಿರಬೇಕು. ಪೂರ್ವಗ್ರಹದಿಂದ ಮುಕ್ತವಾಗಿರಬೇಕು. ವಿಭಜಿಕ, ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದಲ್ಲಿ ನಾವಿದ್ದೇವೆ. ನಮ್ಮ ಓದು ಸಹ ವಿಭಜಿತವಾಗುವ ಅಪಾಯ ಇರುತ್ತದೆ. ಆ ವಿಭಜಿತ ಓದು ಅದು ಏಷ್ಟೋ ಸಾರಿ ಸಾಹಿತ್ಯ ಕೃತಿಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದರಂದ ನಮ್ಮನ್ನು ವಂಚಿಸುವಂತಹ ಅಪಾಯ ಇದ್ದೇ ಇರುತ್ತದೆ. ಓದು ಬೇರೆ, ಓದಿದ ಮೇಲೆ ಒಪ್ಪುವುದು ಮತ್ತು ಒಪ್ಪದಿರುವುದು ಬೇರೆ. ಒಪ್ಪುವುದು ಒಪ್ಪದೇ ಇರುವುದು ಆ ನಂತರದ ಹಂತ. ಆದರೆ ನಾವು ಯಾವುದೇ ಪೂರ್ವಗ್ರಹವಿಲ್ಲದೆ ಓದಬೇಕಾಗುತ್ತದೆ. ಸಾಹಿತ್ಯದ ಮೊದಲ ಓದಿಗೆ ಮಗುತನ ಬೇಕು. ನಮ್ಮ ಮೆದುಳಿನಲ್ಲಿ ಮಗುತನ ಇದ್ದರೆ ಅಹಂಕಾರವಿಲ್ಲದ ಅರಿವಿನ ಆಸಕ್ತಿಯಿರುತ್ತದೆ ಮಗುತನಕ್ಕೆ ಇರುತ್ತದೆ ಎಂದು ಹೇಳಿದರು.
ಕಳೆಗನ್ನಡದ ಓದನ್ನು ಕಾಲಾನುಸಂದಾನದ ಪ್ರಕ್ರಿಯೆ ಎಂದು ಕರೆಯಬಹುದು. ಹಳೆಗನ್ನಡ ಹುಟ್ಟಿದ ಕಾಲ ಬೇರೆ, ನಾವು ಅದನ್ನು ಓದುತ್ತಿರುವ ಕಾಲವೇ ಬೇರೆ ಸಾಕಷ್ಟು ಬದಲಾಗಿರುತ್ತದೆ. ಶತಮಾನಗಳಲ್ಲಿ ಆದರೆ ಒಂದು ಅನುಸಂಧಾನ ನಡೆಯಬೇಕು. 19ನೇ ಶತಮಾನ, 21ನೇ ತನಮಾನ ಎರಡು ಕಾಲಗಟ್ಟಗಳ ನಡುವಿನ ಸಂಬಂಧ ಈ ಎರಡರಿಂದ ಇನ್ನೋನೋ ಹುಟ್ಟುತ್ತವೆ ಎಂದು ಹೇಳಿದರು.

ಕೃಷಿ ಎನ್ನುವುದು ಮಳೆ ಬೆಳೆ ಎಲ್ಲವನ್ನು ನೋಡಿಕೊಂಡು ಬರುವುದು. ಒಂದು ಕಾಲದಲ್ಲಿ ಉತ್ತಮ ಬೆಳೆ ಬಂದರೆ ಇನ್ನೊಂದು ಕಾಲದಲ್ಲಿ ಬರುವುದಿಲ್ಲಾ ಆದರೆ ನಾವು ಕೃಷಿ ಮಾಡುತ್ತಲೇ ಇರಬೇಕು. ಸಾಹಿತ್ಯ ಕೃಷಿ ನಿರಂತರವಾದ ಕ್ರೀಯೆ ಅಗಿರಬೇಕು ಬಹಳಷ್ಟು ಬಾರಿ ಶ್ರೇಷ್ಠವಾದದ್ದನ್ನೇ ಬರೆಯಬೇಕು, ಶ್ರೇಷ್ಠವಾದದ್ದನ್ನೇ ಪ್ರಕಟಿಸಬೇಕು ಎನ್ನುವ ಅಲಿಖಿತವಾದ ನಿಯಮವನ್ನು ವಿಮರ್ಷಕರು ಹಾಕಿ ಬಿಟ್ಟರೆ, ಅನೇಕ ಪ್ರತಿಭೆಗಳ ಭ್ರೂಣಹತ್ಯೆ ಆಗುತ್ತದೆ ಒಂದು ರೀತಿಯಲ್ಲಿ ಪ್ರತಿಭಾ ಭೂಣಹತ್ಯೆ ಎಂದು ಹೇಳಿದರು
ಶ್ರೇಷ್ಠವಾದದ್ದು ಬರಬೇಕು ಆದರೆ ಶ್ರೇಷ್ಠವಾದದ್ದು ಬರುವುದಕ್ಕೆ ಏನು ಮಾತದಂಡ? ಸಾಹಿತ್ಯದಲ್ಲಿ ಶ್ರೇಷ್ಠತೆ ಎಂದರೆ ನಿರಂತರವಾದ ಶೋಧ. ಶ್ರೇಷ್ಠವಾದದನ್ನು ಬರೆಯಬೇಕು ಎಂದು ನಾವು ನಿರಂತವಾಗಿ ಬರೆಯುತ್ತಲೇ ಇರುತ್ತೇವೆ ಅದು ಕೃಷಿ, ಕೃಷಿ ಮಾಡುತ್ತಲೇ ಇರುತ್ತೇವೆ ಯಾವತ್ತೋ ಒಂದು ದಿನ ಉತ್ತಮವಾದದ್ದು ಬರಬಹುದು. ಬಹಳ ಉತ್ತಮವಾಗಿ ಬರೆದಂತಹ ಲೇಖಕರೇ ಇನ್ನೊಮ್ಮೆ ಕಳಪೆಯಾದ ಕೃತಿಯನ್ನು ಕೊಡಲು ಸಾಧ್ಯವಿರುತ್ತದೆ ಎಂದು ಹೇಳಿದರು.
ಉಳುವೆ ಎನ್ನುವಂತಹ ಪದ ಸಾಹಿತ್ಯ ಸೃಷ್ಟಿ ಎನ್ನುವುದು ನಿರಂತರವಾದ ಕೃಷಿ ಆಗಿರಬೇಕು. ಯಾವುದನ್ನು ನೀವು ಶ್ರೇಷ್ಠ ಎಂದು ಕರೆಯುತ್ತಿರೋ ಅದು ಬರಬಹುದು ಅಥವಾ ಬರದೇ ಇರಬಹುದು ಆದರೆ ನಿರಂತರವಾಗಿ ಬರೆಯುತ್ತಾ ಹೋದಂತೆ ಸಾಹಿತ್ಯ ಬೆಳೆಯುತ್ತದೆಯೋ ಬಿಡುತ್ತದೆಯೋ ಅದನ್ನು ವಿಮರ್ಷಕರು ನೋಡಿಕೊಳ್ಳುತ್ತಾರೆ. ಆದರೆ ನಿರಂತರವಾಗಿ ಬರೆಯುವ ಪ್ರಕ್ರಿಯೆ ಬಹಳ ಮುಖ್ಯವಾದುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕಾಲಮಾನದ ಕಾರಣಕ್ಕಾಗಿ ನಾವು ಹಳೆಗನ್ನಡ. ಪ್ರಾಚೀನ ಕನ್ನಡ, ನಡುಗನ್ನಡ ಹೀಗೆಲ್ಲ ಹೇಳುತ್ತಿದ್ದೇವೆ, ಆದರೆ ನಮ್ಮ ಕನ್ನಡ ಪರಂಪರೆಯ ಮಹಾನ್ ಕವಿ- ಪಂಪ, ರನ್ನ, ಜನ್ನ, ಲಕ್ಷ್ಮೀಶ, ಕುಮಾರವ್ಯಾಸ, ರಾಘವಾಂಕ ಇವೆರಲ್ಲರೂ ಹಳೆಗನ್ನಡದ ಕವಿಗಳಲ್ಲ, ಅವರೆಲ್ಲರೂ ಸಮಕಾಲೀನ ಕವಿಗಳು. ಹೀಗಾಗಿ ಹಳೆಗನ್ನಡ ಓದು ಇಂದಿಗೂ ಮುಖ್ಯವಾಗುತ್ತದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟ ಕಾಳಾವರ, ವಿಮರ್ಶಕರೂ ಆದ ಹೊಸಕೋಟೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ರಾಮಲಿಂಗಪ್ಪ ಟಿ. ಬೇಗೂರು, ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಮಂಗಳಗಂಗೋತ್ರಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ಹಿರಿಯಡಕ ಪಿಯು ಕಾಲೇಜಿನ ರಮೇಶ್ ನಾಯಕ್ ಉಪಸ್ಥಿತರಿದ್ದರು.

ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ನಂದೀಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಆಶಯ ಭಾಷಣ ಮಾಡಿದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿಎಂ ವಂದಿಸಿದರೆ, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು.