ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

Date:

Advertisements
ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ, 'ಎಂಆರ್‌ಪಿ'ಯಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ಮಾಡುವ ಮೂಲಕ, ಜಿಎಸ್‌ಟಿಯನ್ನು ಕಡಿಮೆ ತೋರಿಸಿ, ಮಾರಾಟ ಬೆಲೆಯನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2017ರಲ್ಲಿ ಜಾರಿಗೆ ತಂದಿದ್ದ ಜಿಎಸ್‌ಟಿ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಸುಧಾರಣೆಗಳನ್ನು ತಂದಿದೆ. ಹಲವಾರು ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಿದೆ. ಜಿಎಸ್‌ಟಿ ಹೊಸ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಬಿಹಾರ ಚುನಾವಣೆಯ ಹೊಸ್ತಿಲಿನಲ್ಲಿರುವಾಗಲೇ ಜಿಎಸ್‌ಟಿ ಪ್ರಮಾಣ ಕಡಿತಗೊಂಡಿರುವುದು ಬಿಜೆಪಿಯ ರಾಜಕೀಯ ಲಾಭದ ಕುರಿತಾದ ಚರ್ಚೆ ಹುಟ್ಟುಹಾಕಿದೆ. ಇದೇ ಸಮಯದಲ್ಲಿ, ಗಂಭೀರ ಪ್ರಶ್ನೆಯೊಂದು ದೇಶವಾಸಿಗಳನ್ನು ಕಾಡುತ್ತದೆ! ಅದು, ‘ಜಿಎಸ್‌ಟಿ ಕಡಿತದ ಲಾಭ ಯಾರಿಗೆ? ಸಾರ್ವಜನಿಕರಿಗೋ ಅಥವಾ ಉತ್ಪನ್ನ ತಯಾರಿಕಾ ಕಂಪನಿಗಳು ಮತ್ತು ಮಾರಾಟಗಾರರಿಗೋ?’ ಎಂಬುದು.

ಹಾಲಿ ಇರುವ ಜಿಎಸ್‌ಟಿ ವ್ಯವಸ್ಥೆಯಲ್ಲಿ ನಾಲ್ಕು ಮುಖ್ಯ ದರಗಳಿದ್ದವು: 5%, 12%, 18% ಹಾಗೂ 28%. ಇದನ್ನು ಬದಲಿಸಿ ಈಗ 5% ಮತ್ತು 18% ಎಂಬ ಪ್ರಮುಖ ಎರಡು ರೀತಿಯ ದರಗಳನ್ನಾಗಿ ಕೇಂದ್ರ ಸರ್ಕಾರ ಮಾರ್ಪಾಡು ಮಾಡಿದೆ. ಜೊತೆಗೆ, ಮಾದಕ ವಸ್ತುಗಳ ಮತ್ತು ಸಿರಿವಂತಿಕೆಯ ದುಬಾರಿ ವಸ್ತುಗಳ ಮೇಲೆ 40%ಗೆ ಏರಿಕೆ ಮಾಡಿದೆ. ಆಹಾರ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಬಹುತೇಕ ದಿನ ಬಳಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಸಂಪೂರ್ಣವಾಗಿ ಕಡಿತಗೊಳಿಸಿ, 0% ಎಂದು ಘೋಷಿಸಿದೆ.

ಈ ಮಾರ್ಪಾಡುಗಳಿಂದಾಗಿ ಆಹಾರ ಉತ್ಪನ್ನಗಳು ಮತ್ತು ಇನ್ಶೂರೆನ್ಸ್ ಮೇಲಿನ ತೆರಿಗೆಯು 0% ಆಗಿರುವುದರಂದ, ದುಡಿಯುವ ಜನರ ಖರ್ಚನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಜನರ ಜೀವನವು ಕೊಂಚ ಸುಧಾರಿಸಲಿದೆ, ಅಧಿಕ ಹೊರೆಯನ್ನು ತಗ್ಗಿಸಲಿದೆ. ಜಿಎಸ್‌ಟಿ ಕಡಿತದಿಂದ ಉಂಟಾಗುವ ಕೊರತೆಯಲ್ಲಿ ಸುಮಾರು ಅರ್ಧದಷ್ಟನ್ನು ಮಾದಕ ವಸ್ತುಗಳು ಮತ್ತು ಸಿರಿವಂತಿಕೆಯ ಮೇಲೆ ಪರಿಚಯಿಸಲಾದ 40% ಜಿಎಸ್‌ಟಿಯಿಂದ ಸರಿದೂಗಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿಕೊಂಡಿದೆ. ಆರ್ಥಿಕತೆಗೂ ಉತ್ತೇಜನ ದೊರೆಯುತ್ತದೆ ಎಂಬುದಾಗಿ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಆದರೆ, ಜಿಎಸ್‌ಟಿ ಕಡಿತದ ಲಾಭ ಜನಸಾಮಾನ್ಯರ ಜೇಬನ್ನು ತಲುಪುತ್ತದೆಯೇ ಎಂಬ ಸ್ಪಷ್ಟ ಪ್ರಶ್ನೆ ಕಾಡುತ್ತಿದೆ. ಇದು ಕಂಪನಿಗಳ ಸಹಕಾರದ ಮೇಲೆ ಅವಲಂಬಿತವಾಗಿದೆ. ಯಾಕೆಂದರೆ, ಜಿಎಸ್‌ಟಿ ಒಂದು ‘ಪರೋಕ್ಷ ತೆರಿಗೆ’. ಇದು ಉತ್ಪಾದನೆಯಿಂದ ಹಿಡಿದು, ಮಾರಾಟದವರೆಗೆ ಪ್ರತಿ ಹಂತವನ್ನೂ ವ್ಯಾಪಿಸಿರುತ್ತದೆ. ಜಿಎಸ್‌ಟಿ ಕಡಿತವು ಉತ್ಪಾದಕರು ತಾವು ಖರೀದಿಸುವ ಕಚ್ಚಾ ವಸ್ತುಗಳು, ಅವುಗಳ ಸಂಗ್ರಹಣೆ, ನಿರ್ವಹಣೆ, ಮಾರ್ಪಡಿಸುವಿಕೆ, ಹೊಸ ಉತ್ಪನ್ನವಾಗಿ ಪರಿವರ್ತಿಸುವಿಕೆ, ಸರಬರಾಜು ಹಾಗೂ ಮಾರಾಟ ವೆಚ್ಚ ಎಲ್ಲವನ್ನೂ ಒಟ್ಟುಗೂಡಿ ಗ್ರಾಹಕರ ಮೇಲೆ ಜಿಎಸ್‌ಟಿಯ ಹೊರೆಯನ್ನು ವಿಧಿಸುತ್ತಾರೆ. ಆದ್ದರಿಂದ, ಜಿಎಸ್‌ಟಿ ಕಡಿತವನ್ನು ಇತರ ವೆಚ್ಚಗಳೊಂದಿಗೆ ಸರಿದೂಗಿಸಿ, ಕಡಿತದ ಲಾಭವನ್ನು ಉತ್ಪಾದಕರು ಮತ್ತು ಮಾರಾಟಗಾರರು ಗ್ರಾಹಕರಿಗೆ ನೀಡದೇ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಆದಾಗ್ಯೂ, ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡಬೇಕು. ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಒದಗಿಸಬೇಕು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೇಳುತ್ತದೆ. ಸರ್ಕಾರವು ಕೂಡ ಕಂಪನಿಗಳು ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿದೆ. ಈಗಾಗಲೇ, ಮಹಿಂದ್ರಾ, ಟಾಟಾ ಮೋಟಾರ್ಸ್, ರೆನಾಲ್ಟ್, ಎಚ್‌ಯುಎಲ್‌ ಸೇರಿದಂತೆ ಹಲವು ಕಂಪನಿಗಳು ಬೆಲೆ ಕಡಿತವನ್ನು ಘೋಷಿಸಿವೆ. ಆದಾಗ್ಯೂ, ಸಾಬೂನು, ಬಿಸ್ಕೆಟ್‌ನಂತಹ ಕಂಪನಿಗಳು ‘ನಿಗದಿತ ದರ’ವನ್ನು ಹೊಂದಿದ್ದು, ದರ ಕಡಿತದ ಬದಲಿಗೆ, ಉತ್ಪನ್ನಗಳ ಪ್ರಮಾಣವನ್ನು ಹೆಚ್ಚಿಸುವುದಾಗಿ ಹೇಳಿಕೊಂಡಿವೆ.

ಆದರೂ, ಕೆಲವು ಸಮೀಕ್ಷೆಗಳು ಮತ್ತು ವಿಶ್ಲೇಷಣೆಗಳು ಹೇಳುವಂತೆ 75% ಕಂಪನಿಗಳು ಜಿಎಸ್‌ಟಿ ಕಡಿತದ ಪೂರ್ಣ ಲಾಭವನ್ನು ಗ್ರಾಹಕರಿಗೆ ನೀಡುವುದಿಲ್ಲ ಎಂದು ಹೇಳುತ್ತಿವೆ. ಅದನ್ನು 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಸಂದರ್ಭವೂ ಸಾಬೀತು ಮಾಡಿದೆ. ಆಗ, ಜಿಎಸ್‌ಟಿ ಜಾರಿಗೊಂಡಾಗ, ಕೆಲವು ಕಂಪನಿಗಳು ಅಧಿಕ ತೆರಿಗೆಯ ಹೆಸರಿನಲ್ಲಿ ತಮ್ಮ ಉತ್ಪನ್ನಗಳ ದರವನ್ನು ಏರಿಕೆ ಮಾಡಿದವು. ಇನ್ನೂ ಹಲವು ಕಂಪನಿಗಳು ‘ಎಂಆರ್‌ಪಿ’ಯಲ್ಲಿ ಮಾರ್ಪಾಡು ಮಾಡುವ, ತಾವು ಮಾರಾಟ ಮಾಡುತ್ತಿದ್ದ ಹಿಂದಿನ ಬೆಲೆಯನ್ನು ಹಾಗೆಯೇ ಉಳಿಸಿಕೊಂಡವು. 2017ರಲ್ಲಿ ಜಿಎಸ್‌ಟಿ ಕಾರಣಕ್ಕಾಗಿ ಯಾವುದೇ ವಸ್ತುಗಳ ಬೆಲೆ ಗಮನಾರ್ಹವಾಗಿ ಕಡಿತಗೊಂಡ ಉದಾಹರಣೆಗಳಿಲ್ಲ. ಅಂದು ಜಿಎಸ್‌ಟಿಯ ಲಾಭದಲ್ಲಿ 25%ಗಿಂತ ಕಡಿಮೆ ಲಾಭ ಗ್ರಾಹಕರಿಗೆ ದೊರೆತರೆ, 75%ಗಿಂತ ಹೆಚ್ಚು ಲಾಭ ಉತ್ಪಾದಕರು ಮತ್ತು ಮಾರಾಟಗಾರರಿಗೆ ದೊರೆತಿದೆ ಎಂಬುದನ್ನು ಸಿಎಎ ವರದಿ ವಿವರಿಸಿದೆ.

ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?

ಈಗಲೂ, ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ, ‘ಎಂಆರ್‌ಪಿ’ಯಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ಮಾಡುವ ಮೂಲಕ, ಜಿಎಸ್‌ಟಿಯನ್ನು ಕಡಿಮೆ ತೋರಿಸಿ, ಮಾರಾಟ ಬೆಲೆಯನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಅದಕ್ಕಾಗಿ, ಅವರು ಕಚ್ಚಾ ವಸ್ತುಗಳ ನಿರ್ವಹಣೆ, ಸಾಗಣೆ, ವಿತರಣೆಯಲ್ಲಿ ದುಬಾರಿ ವೆಚ್ಚವನ್ನು ತೋರಿಸಬಹುದು.

ಹೇಳಿಕೇಳಿ, ಮೋದಿ ಸರ್ಕಾರವು ಬಂಡವಾಳಶಾಹಿ ಪರವಾದ ನೀತಿ, ನಿಲುವು, ಧೋರಣೆಗಳನ್ನು ಹೊಂದಿದೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ, 2022ರಲ್ಲಿ ‘ಆಂಟಿ-ಪ್ರಾಫಿಟಿಯರಿಂಗ್ ಆಥಾರಿಟಿ’ ಬದಲಾಗಿ ಜಾರಿಗೆ ಬಂದ, ಸಿಬಿಐಸಿ ಕೂಡ ದುರ್ಬಲವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಕಂಪನಿಗಳು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಜಿಎಸ್‌ಟಿ ಕಡಿತವನ್ನು ಬಳಸಿಕೊಳ್ಳುವ ಅಪಾಯವಿದೆ. ಹೀಗಾಗಿಯೇ, ಜಿಎಸ್‌ಟಿ ಕಡಿತವು ಉತ್ಪಾದಕರು ಮತ್ತು ಮಾರಾಟಗಾರರಿಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ಯಂತಾಗಿದೆ ಎಂಬ ಅಭಿಪ್ರಾಯಗಳಿವೆ.

ಈ ಅಭಿಪ್ರಾಯವು ಸುಳ್ಳಾಗಬೇಕಾದರೆ, ಗ್ರಾಹಕರಿಗೆ ಲಾಭ ದೊರೆಯಬೇಕು. ಅದಕ್ಕಾಗಿ, ಮೋದಿ ಸರ್ಕಾರವು ಜನಪರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಕಂಪನಿಗಳ ದರ ಪರಿಷ್ಕರಣೆಯನ್ನು ಪರಿಶೀಲಿಸಬೇಕು. ಹಿಂದಿನ ಬೆಲೆಗೂ, ಸೆಪ್ಟೆಂಬರ್ 22ರಿಂದ ಬದಲಾಗುವ ಬೆಲೆಗಳ ನಡುವಿನ ಅಂತರವನ್ನು ಗಮನಿಸಬೇಕು. ಜಿಎಸ್‌ಟಿಯ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸುವಂತೆ ಉತ್ಪಾದಕರ ಮೇಲೆ ಒತ್ತಡ ಹೇರಬೇಕು. ಅಂತೆಯೇ, ಜನಸಾಮಾನ್ಯರು ಕೂಡ, ಕಂಪನಿಗಳು ಕೊಡುವ ಬಿಲ್‌ಗಳನ್ನು ಪರಿಶೀಲಿಸಿ ಕಂಪನಿಗಳು ಜಿಎಸ್‌ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ರವಾನಿಸುತ್ತಿಲ್ಲ ಎಂಬುದು ಕಂಡುಬಂದರೆ, gst.gov.in ರೀತಿಯ ಸರ್ಕಾರಿ ಪೋರ್ಟಲ್‌ಗಳಲ್ಲಿ ದೂರು ನೀಡಬಹುದು, ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಸರ್ಕಾರಿ ಮತ್ತು ಸಾಮೂಹಿಕ ಒತ್ತಡವಿಲ್ಲದಿದ್ದರೆ, ‘ಜಿಎಸ್‌ಟಿ ಕಡಿತ’ದ ಲಾಭ ಗ್ರಾಹಕರನ್ನು ಮುಟ್ಟಲಾರದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು...

Download Eedina App Android / iOS

X