ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐವರು ಉಪನ್ಯಾಸಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತ ಉಪನ್ಯಾಸಕಿ ನೀಡಿದ ದೂರಿನ ಆಧಾರದ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಮ್ ಎಂಬವರು ವಿರುದ್ಧ ಉಪನ್ಯಾಸಗಿ ದೂರು ನೀಡಿದ್ದಾರೆ. ಈ ಐವರು ಉಪನ್ಯಾಸಕರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.
ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಆರೋಪಿ ಉಪನ್ಯಾಸಕರ ದಾಂಧಲೆಯ ಕೆಲವು ವಿಡಿಯೋಗಳು ಬಹಿರಂಗಗೊಂಡಿವೆ ಎಂದು ‘ಟಿವಿ9’ ವರದಿ ಮಾಡಿದೆ. ಆರೋಪಿ, ಸೋಶಿಯಾಲಜಿ ವಿಭಾಗದ ಅತಿಥಿ ಉಪನ್ಯಾಸಕ ರಾಮಾಂಜನೇಯ ಅವರು ಮದ್ಯ ಸೇವಿಸಿ ಕ್ಯಾಂಪಸ್ ಆವರಣದಲ್ಲಿ ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ, ವಿದ್ಯಾರ್ಥಿಯನ್ನು ಎತ್ತಿಕೊಂಡು ಡ್ಯಾನ್ಸ್ ಮಾಡುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ಮಾತ್ರವಲ್ಲದೆ, ಇಂಟರ್ನಲ್ ಮಾರ್ಕ್ಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳೂ ಕೂಡ ರಾಮಾಂಜನೇಯ ವಿರುದ್ಧ ಕೇಳಿಬಂದಿವೆ ಎಂದು ವರದಿಯಾಗಿದೆ.