ಬೈಕ್ ಓವರ್‌ಟೇಕ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯ ಹಿನ್ನೆಲೆ ಇಬ್ಬರನ್ನು ಹೊನ್ನಾವರ ಪೊಲೀಸರು ಬಂಧಿಸಿರುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಶಿ ಗ್ರಾಮದ ವಿವೇಕ ಸುರೇಶ ನಾಯ್ಕ ಮತ್ತು ಸುದೀಪ್ ನಾಯ್ಕ ತಮ್ಮ ಬೈಕ್‌ನಲ್ಲಿ ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ಬರುತ್ತಿದ್ದರು. ಇದೇ ವೇಳೆ ಮಾವಿನಹೊಳೆ ಬಸ್ ನಿಲ್ದಾಣದ ಬಳಿ ವಿವೇಕ ನಾಯ್ಕ ಅವರು ಮುಂದೆ ಹೋಗುತ್ತಿದ್ದ ಮತ್ತೊಂದು ಬೈಕ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ, ಆ ಬೈಕ್‌ನಲ್ಲಿದ್ದ ಆರೋಪಿಗಳಾದ ಮೊಹಮ್ಮದ್ ಅಸ್ನಾನ್ (26) ಮತ್ತು ಪ್ರದೀಪ್ ಅಂಬಿಗ (26) ಇಬ್ಬರೂ ವಿವೇಕ ನಾಯ್ಕ ಅವರಿಗೆ ಅಸಭ್ಯವಾಗಿ ಕೈ ಸನ್ನೆ ಮಾಡಿದ್ದಾರೆ. ಪರಿಣಾಮ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಜಗಳ ತೀವ್ರಗೊಂಡಿದೆ. ಬಳಿಕ ಮೊಹಮ್ಮದ್ ಅಸ್ನಾನ್ ತನ್ನ ಜೇಬಿನಲ್ಲಿ ಇಟ್ಟಿದ್ದ ಸಣ್ಣ ಚಾಕುವಿನಿಂದ ವಿವೇಕ ನಾಯ್ಕ ಅವರನ್ನು ಇರಿಯಲು ಯತ್ನಿಸಿದ್ದು, ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ವೃತ್ತ ನಿರೀಕ್ಷಕರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಭೂಮಿಗಾಗಿ ದಶಕಗಳ ಹೋರಾಟ; ಸೂರಿನ ನಿರೀಕ್ಷೆಯಲ್ಲಿ ಅರಣ್ಯ ವಾಸಿಗಳು
ಈ ಘಟನೆ ಹಠಾತ್ ಉಂಟಾದ ಪ್ರಚೋದನೆಯಿಂದ ನಡೆದಿದ್ದೇ ಹೊರತು ಯಾವುದೇ ಹಳೆಯ ದ್ವೇಷ ಅಥವಾ ಕೋಮು ವೈಷಮ್ಯಕ್ಕೆ ಸಂಬಂಧಪಟ್ಟಿಲ್ಲ. ಘಟನೆಯ ಕುರಿತು ಕೆಲವು ವದಂತಿಗಳು ಹಾಗೂ ಸುಳ್ಳು ಮಾಹಿತಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಅಪಪ್ರಚಾರದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.