ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಜ್ಯುವೆಲರಿ ವರ್ಕ್ ಶಾಪ್ನಲ್ಲಿ ಕಳೆದ ಸೆ.8ರ ತಡರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈಭವ್ ಮೋಹನ ಘಾಟಗೆ ಅವರ ಮಾಲಿಕತ್ವದ ಚಿನ್ನ ಮತ್ತು ಬೆಳ್ಳಿ ಕರಗಿಸುವ ‘ವೈಭವ್ ರಿಫೈನರ್’ ಎಂಬ ಅಂಗಡಿಗೆ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು, ಡ್ರಾಯರ್ನಲ್ಲಿದ್ದ ಅಂದಾಜು 65,96,000 ರೂ. ಮೌಲ್ಯದ 680 ಗ್ರಾಂ ಚಿನ್ನ, 22,00,000 ರೂ. ಮೌಲ್ಯದ 200 ಗ್ರಾಂ ಚಿನ್ನ, ರಿಫೈನ್ ಮಾಡಿದ್ದ ಸುಮಾರು 6,25,000 ರೂ. ಮೌಲ್ಯದ 5 ಕೆ.ಜಿ. ತೂಕದ ಬೆಳ್ಳಿಯ ಸಣ್ಣಸಣ್ಣ ಗಟ್ಟಿಗಳು ಮತ್ತು ನಗದು 1,50,000 ರೂ. ಸೇರಿ ಒಟ್ಟಾರೆ 95,71,000 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ ಬಗ್ಗೆ ಈಗಾಗಲೇ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 168/2025 U/s. 331(4), 331(3), 305 BNS ರಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ವಿ.ಬಡಿಗೇರ. ನೇತೃತ್ವದಲ್ಲಿ ಪಿಎಸ್‌ಐ ಭರತೇಶ ಕಂಕಣವಾಡಿ, ಕಾಫು ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ ಕೊಲ್ಲೂರು ಠಾಣಾ ಪಿಎಸ್‌ಐ ವಿನಯಕುಮಾರ್ ಕೆ. ಸಿಬ್ಬಂದಿಯವರಾದ ಹರೀಶ್ ಎಎಸ್‌ಐ, ಜೀವನ್ ಕುಮಾರ್, ಪ್ರಸನ್ನ ಕುಮಾರ್, ಸಂತೋಷ್ ಶೆಟ್ಟಿ, ಸಂತೋಷ್ ರಾಥೋಡ್, ಶಿವಕುಮಾರ್, ಹೇಮಂತ್‌ಕುಮಾರ್ ಎಂ.ಆರ್, ಸುನೀಲ್ ರಾಥೋಡ್, ಮಣಿಪಾಲ್ ಠಾಣಾ ರವಿರಾಜ್ ಕೊಲ್ಲೂರು ಠಾಣೆ ನಾಗೇಂದ್ರ ಹಾಗೂ ಮಹಾರಾಷ್ಟ್ರರಾಜ್ಯದ ಅಕ್ಲುಜ್ ಪೋಲೀಸ್ ಠಾಣಾ ಸಿಬ್ಬಂದಿಯವರಾದ ಎಸ್ ಆರ್ ಮಾದುಬಾವಿ, ವಿಬಿ ಘಾಟಗೆ, ವಿಎ ಸಾಟೆರವರ ತಂಡ ಪ್ರಕರಣದಲ್ಲಿನ ಆರೋಪಿಳಾದ ಮಲ್‌ಶಿರೋಸ್ ತಾಲೂಕು, ಸೋಲಾಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯದ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ, ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್ ಶ್ರೀಮಂತ್(25), ಇವರುಗಳನ್ನು ಸೆಪ್ಟಂಬರ್ 12 ರಂದು ಮಹಾರಾಷ್ಟ್ರ ಜಿಲ್ಲೆ ಸೋಲಾಪುರ ಜಿಲ್ಲೆ ಮಲ್‌ಶಿರೋಸ್ ತಾಲೂಕು, ನಿಮ್‌ಗಾಂವ್, ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 748.8 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ 74,88,000/-, 4 ಕೆಜಿ 445 ಗ್ರಾಂ ಬೆಳ್ಳಿ ಅಂದಾಜು ಮೌಲ್ಯ 3,60,000/-, ನಗದು ಹಣ 5,00,000/-, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಕಾರು ಅಂದಾಜು ಮೌಲ್ಯ 4,00,000/-, ಒಟ್ಟು ರೂ 87,48,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.