ಎಚ್-1ಬಿ ವೀಸಾಗಾಗಿ ಒಟ್ಟು 4,79,953 ಭಾರತೀಯರು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ, ಸುಮಾರು 70-72% ಅಂದರೆ, ಸುಮಾರು 3,35,967 ರಿಂದ 3,45,166 ಭಾರತೀಯರು ಈಗ ಎಚ್-1ಬಿ ವೀಸಾ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕಗೆ ವಿದೇಶಿಗರ ವಲಸೆ ತಡೆಯುತ್ತೇನೆ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್1–ಬಿ ವೀಸಾದ ಶುಲ್ಕವನ್ನು ವಾರ್ಷಿಕ 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿದ್ದಾರೆ. ಶುಲ್ಕ ಹೆಚ್ಚಳದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಇದೇ ಸೆಪ್ಟೆಂಬರ್ 21ರಿಂದ ಜಾರಿಗೆ ಬರಲಿದೆ.
ಶುಲ್ಕವನ್ನು ಹೆಚ್ಚಿಸಿರುವ ಟ್ರಂಪ್, ಅಮೆರಿಕದಲ್ಲಿ ಉದ್ಯೋಗ ಮಾಡಬೇಕು ಎಂಬ ಕನಸು ಕಾಣುವ ಭಾರತೀಯರು ಸೇರಿದಂತೆ ನಾನಾ ದೇಶಗಳ ಯುವಜನರ ಕನಸಿಗೆ ಮಣ್ಣೆರಚಿದ್ದಾರೆ.
”ಅಮೆರಿಕದ ವಲಸೆ ವ್ಯವಸ್ಥೆಯಲ್ಲಿ ಕೌಶಲ್ಯವುಳ್ಳ ಕಾರ್ಮಿಕರು ಅಮೆರಿಕಗೆ ಬರಲು ಅವಕಾಶ ನೀಡುತ್ತಿದ್ದ ಎಚ್-1ಬಿ ವೀಸಾ ದುರುಪಯೋಗವಾಗುತ್ತಿದೆ. ಅದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಜಯವಾಗಿಯೂ ಕೌಶಲ್ಯ ಉಳ್ಳವರು ಅಮೆರಿಕಗೆ ಬರಬೇಕು. ಮಾತ್ರವಲ್ಲ, ಬರುವವರು ಅಮೆರಿಕನ್ ಕೆಲಸಗಾರರನ್ನು ಬದಲಿಸಬಾರದು ಎಂಬ ಕಾರಣಕ್ಕಾಗಿ ಎಚ್-1ಬಿ ವೀಸಾದ ಶುಲ್ಕ ಹೆಚ್ಚಿಸಲಾಗಿದೆ” ಎಂದು ಶ್ವೇತ ಭವನದ ಕಾರ್ಯದರ್ಶಿ ವಿಲ್ ಶಾರ್ಫ್ ಹೇಳಿದ್ದಾರೆ.
ಈ ಹಿಂದೆ, ಎಚ್-1ಬಿ ವೀಸಾಗೆ ಶುಲ್ಕವು 215 ಡಾಲರ್ ಅಂದರೆ, 18,000 ರೂ. ಮಾತ್ರವೇ ಇತ್ತು. ಇದೀಗ, ಏಕಾಏಕಿ ಟ್ರಂಪ್ ಅವರು 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿದ್ದಾರೆ. ಅಂದರೆ, 84 ಲಕ್ಷ ರೂ. ಆಗಲಿದೆ. ಆದಾಗ್ಯೂ, ವೀಸಾ ಮೇಲೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಅಧಿಕಾರ ಟ್ರಂಪ್ ಅವರಿಗೆ ಇಲ್ಲ. ಹೀಗಾಗಿ, ಈ ನಿಯಮ ಜಾರಿಗೆ ಬರಬೇಕೆಂದರೆ, ಅಮೆರಿಕ ಕಾಂಗ್ರೆಸ್‌ನ ಅನುಮೋದನೆ ಅಗತ್ಯವಿದೆ.
ಒಂದು ವೇಳೆ, ಅಮೆರಿಕ ಸೆನೆಟ್ ಟ್ರಂಪ್ ನಿರ್ಧಾರವನ್ನು ಅನುಮೋದಿಸಿದರೆ, ವೀಸಾ ಶುಲ್ಕವು ಭಾರೀ ಹೇರಿಕೆ ಆಗಲಿದೆ. ಇಷ್ಟು ಬೃಹತ್ ಮೊತ್ತದ ಶುಲ್ಕವನ್ನು ಪಾವತಿಸಿ ಎಚ್-1ಬಿ ವೀಸಾ ಪಡೆಯುವುದು ಭಾರತದ ಬಹುಸಂಖ್ಯಾತರಿಗೆ ಸಾಧ್ಯವಾಗದ ಮಾತು. ಟ್ರಂಪ್ ಅವರ ಈ ಧೋರಣೆಯು ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳ ಪ್ರತಿಭಾವಂತರು ಅಮೆರಿಕ ಪ್ರವೇಶಿಸದಂತೆ ತಡೆಯುತ್ತದೆ. ಬದಲಾಗಿ, ಶ್ರೀಮಂತರು ಮತ್ತು ಅವರ ಮಕ್ಕಳು ಮಾತ್ರ ಅಮೆರಿಕಗೆ ಹಾರಲು ಸಾಧ್ಯವಾಗುವಂತೆ ಮಾಡುತ್ತದೆ.
2025ರ ಫೆಬ್ರವರಿಯಲ್ಲಿ ಅಮೆರಿಕಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಎಚ್-1ಬಿ ವೀಸಾ ವಿತರಣೆಯನ್ನು ಹೆಚ್ಚಿಸುವಂತೆ ಕೋರಿದ್ದರು. ಇದರಿಂದ, ಅಮೆರಿಕ-ಭಾರತ ಎರಡೂ ರಾಷ್ಟ್ರಗಳಿಗೆ ಲಾಭವಾಗಲಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ಟ್ರಂಪ್ ಅವರು ವೀಸಾ ವಿತರಣೆಯನ್ನು ಏರಿಸುವ ಬಲದಾಗಿ, ವೀಸಾದ ಶುಲ್ಕವನ್ನು ಹೆಚ್ಚಿಸಿದ್ದಾರೆ.
ಪ್ರಸ್ತುತ, ಎಚ್-1ಬಿ ವೀಸಾಗಾಗಿ ಒಟ್ಟು 4,79,953 ಭಾರತೀಯರು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ, ಸುಮಾರು 70-72% ಅಂದರೆ, ಸುಮಾರು 3,35,967 ರಿಂದ 3,45,166 ಭಾರತೀಯರು ಈಗ ಎಚ್-1ಬಿ ವೀಸಾ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು, ಭಾರತದಲ್ಲಿ ನಿರುದ್ಯೋಗದ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಗೂ ಕಾರಣವಾಗಲಿದೆ.
ಈ ಲೇಖನ ಓದಿದ್ಧೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
ಇದೇ ವೇಳೆ, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅಮೆರಿಕವನ್ನು ತೊರೆಯದಂತೆ ಮತ್ತು ಅಮೆರಿಕದಿಂದ ಹೊರಗಿರುವ ಉದ್ಯೋಗಿಗಳು ಕೂಡಲೇ ಅಮೆರಿಕಗೆ ಹಿಂದಿರುಗುವಂತೆ ಸೂಚನೆ ನೀಡಿವೆ.
ಆದಾಗ್ಯೂ, ಟ್ರಂಪ್ ನಿರ್ಧಾರದ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಭಾರತದಲ್ಲಿ ‘ಟ್ರಂಪ್ ಧೋರಣೆಯು ಭಾರತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಎಚ್-1ಬಿ ವೀಸಾ ಶುಲ್ಕ ಏರಿಕೆಯ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಹುಟ್ಟುಹಬ್ಬದ ಕರೆಯ ನಂತರ ನೀವು ಸ್ವೀಕರಿಸಿದ ರಿಟರ್ನ್ ಉಡುಗೊರೆಗಳಿಂದ ಭಾರತೀಯರು ನೋವು ಅನುಭವಿಸುತ್ತಿದ್ದಾರೆ. ನಿಮ್ಮ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್’ದಿಂದ H-1B ವೀಸಾ ಹೊಂದಿರುವವರ 70% ಭಾರತೀಯರ ಮೇಲೆ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.