H-1B ವೀಸಾಗಳ ಮೇಲೆ ವಾರ್ಷಿಕ 100,000 ಡಾಲರ್ ಶುಲ್ಕ ವಿಧಿಸುವ ಅಮೆರಿಕದ ಕ್ರಮಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
H-1B ಕುರಿತು ಸುದ್ದಿ ವರದಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ʼನಾನು ಮತ್ತೆ ಹೇಳುತ್ತೇನೆ, ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ” ಎಂದು ಬರೆದುಕೊಂಡಿದ್ದಾರೆ.
ವಲಸೆಯನ್ನು ಹತ್ತಿಕ್ಕಲು ಅಮೆರಿಕ ಆಡಳಿತ ನಡೆಸುತ್ತಿರುವ ಪ್ರಯತ್ನಗಳಲ್ಲಿ ಒಂದಾಗಿ H1-B ವೀಸಾಗಳ ಶುಲ್ಕವನ್ನು ವಾರ್ಷಿಕವಾಗಿ 100,000 ಡಾಲರ್ ಗಳಿಗೆ ಹೆಚ್ಚಿಸುವ ಘೋಷಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. H-1B ವೀಸಾ ಹೊಂದಿರುವವರಲ್ಲಿ ಶೇ. 71 ರಷ್ಟು ಪಾಲನ್ನು ಹೊಂದಿರುವ ಭಾರತಕ್ಕೆ ಈ ಕ್ರಮದಿಂದ ಹೆಚ್ಚು ತೊಂದರೆಯಾಗುವ ನಿರೀಕ್ಷೆಯಿದೆ.
ಡೊನಾಲ್ಡ್ ಟ್ರಂಪ್ ಅವರ ಈ ನಡೆಗೆ ಪ್ರಧಾನಿ ಮೋದಿ ಅವರನ್ನು ಇತರ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!
“ಇತ್ತೀಚಿನ H1-B ವೀಸಾಗಳ ನಿರ್ಧಾರದಿಂದ ಅಮೆರಿಕ ಸರ್ಕಾರವು ಭಾರತದ ಅತ್ಯುತ್ತಮ ಮತ್ತು ಉಜ್ವಲ ಮನಸ್ಸಿನವರ ಭವಿಷ್ಯಕ್ಕೆ ಹೊಡೆತ ನೀಡಿದೆ” ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಎಕ್ಸ್ ನಲ್ಲಿ ಬರೆದಿದ್ದಾರೆ.
“ಐಎಫ್‌ಎಸ್ ಮಹಿಳಾ ರಾಜತಾಂತ್ರಿಕರೊಬ್ಬರನ್ನು ಅಮೆರಿಕದಲ್ಲಿ ಅವಮಾನಿಸಿದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೋರಿಸಿದ ಧೈರ್ಯ ನನಗೆ ಇನ್ನೂ ನೆನಪಿದೆ” ಎಂದು ಅವರು ಬರೆದುಕೊಂಡಿದ್ದಾರೆ.
“ಹುಟ್ಟುಹಬ್ಬದ ಕರೆಯ ನಂತರ ಭಾರತೀಯರು ಪಡೆಯುವ ರಿಟರ್ನ್ ಉಡುಗೊರೆಗಳಿಂದ ಹೆಚ್ಚಾಗಿ ನೋವು ಅನುಭವಿಸುತ್ತಾರೆ. ನಿಮ್ಮ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್’ ಸರ್ಕಾರದಿಂದ ಬರ್ತ್‌ಡೇ ರಿಟರ್ನ್ ಉಡುಗೊರೆ H-1B ವೀಸಾಗಳ ಮೇಲೆ 100,000 ಡಾಲರ್ ವಾರ್ಷಿಕ ಶುಲ್ಕ! ಇದು ಭಾರತೀಯ ಟೆಕ್ ನೌಕರರಿಗೆ ಅತ್ಯಂತ ಕಠಿಣ ಪರಿಣಾಮ ಬೀರುತ್ತದೆ, H-1B ವೀಸಾ ಹೊಂದಿರುವವರಲ್ಲಿ ಶೇ 70 ಭಾರತೀಯರು…” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರೆದುಕೊಂಡಿದ್ದಾರೆ.