ರಾಜ್ಯಾದ್ಯಂತ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡಲು ನಡೆಸುತ್ತಿರುವ ಪ್ರಯತ್ನವನ್ನು ಕೈಬಿಡಬೇಕು ಎಂದು ಅಖಿಲ ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಭಾದ ಚಿಂತಾಮಣಿ ಘಟಕ ಒತ್ತಾಯಿಸಿದ್ದು, ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ತೀರಾ ಹಿಂದುಳಿದಿದ್ದು, ರಾಜಕೀಯವಾಗಿ ಈಗಲೂ ಸಣ್ಣ ಅವಕಾಶಗಳನ್ನು ಪಡೆಯಲು ಕಷ್ಟಪಡುತ್ತಿದೆ. ಇಂತಹ ಸಂಧರ್ಭದಲ್ಲಿ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡದ ಪಟ್ಟಿಗಳಿಗೆ ಸೇರಿಸುವ ಪ್ರಯತ್ನ ಪರಿಶಿಷ್ಠ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಕೊಡಲಿಪೆಟ್ಟು ಕೊಟ್ಟಂತಾಗುತ್ತದೆ. ಸಂವಿಧಾನ ಬದ್ದವಾಗಿ ಕೆಲವು ಜಿಲ್ಲೆಗಳಲ್ಲಿ ಜೇನು ಕುರುಬ, ಕಾಡು ಕುರುಬ ಸೇರಿದಂತೆ ಕೆಲವು ಉಪ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲಾಗಿದೆ. ಅಲ್ಲದೆ ಮುಖ್ಯ ವಾಹಿನಿಯಲ್ಲಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ವಾಲ್ಮೀಕಿ ಸಮುದಾಯದ ಯುವ ಮುಖಂಡ ನಲ್ಲಗುಟ್ಟಹಳ್ಳಿ ಆನಂದ್ ಮಾತನಾಡಿ, “ಕರ್ನಾಟಕದ ರಾಜ್ಯದಲ್ಲಿ 16 ಮೀಸಲಾತಿ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 14 ಜನ ಪ್ರತಿನಿಧಿಗಳನ್ನು ಗೆಲ್ಲಿಸಿಕೊಟ್ಟಿದ್ದೇವೆ. ಪರಿಶಿಷ್ಟ ಪಂಗಡ ವಾಲ್ಮೀಕಿ ನಾಯಕ ಸಮುದಾಯಗಳ ಪಟ್ಟಿಯಲ್ಲಿರುವ 51 ಜಾತಿಗಳಿಗೆ 7.5% ರಷ್ಟು ಮೀಸಲಾತಿ ಸಲ್ಲುತ್ತಿಲ್ಲ. ಈ ಸಂದರ್ಭದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸರ್ಕಾರದ ಪ್ರಯತ್ನವನ್ನು ಈ ಕೂಡಲೇ ಕೈ ಬಿಡಬೇಕು. ಒಂದು ವೇಳೆ ಕುರುಬ ಸಮುದಾವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಪ್ರಯತ್ನ ನಡೆಸಿದರೆ, ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಚಿಂತಾಮಣಿ | ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ
ಈ ಸಂದರ್ಭದಲ್ಲಿ ನಗರಸಭಾ ನಾಮ ನಿರ್ದೇಶನ ಸದಸ್ಯ ಲಪಟ್ ಶ್ರೀನಿವಾಸ್, ವೆಂಕಟೇಶ್, ವಕೀಲ ಪ್ರಸಾದ್, ಪಾಲೇಪಲ್ಲಿ ರವಿ, ಶಂಕರ್, ಕೆ ಪಿ ನಾರಾಯಣಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನರಸಿಂಹ, ಶಂಕರ್, ನರೇಶ್, ಗಿರೀಶ್, ಎಂಎಸ್ ನರಸಿಂಹ, ಮಣಿಕಂಠ, ವೇಣುಗೋಪಾಲ್, ಅದೇಪ್ಪ ಹಾಗೂ ಇತರರು ಉಪಸ್ಥಿತರಿದ್ದರು.