‘ನಾಡಹಬ್ಬ ದಸರಾದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಬಾನು ಮುಷ್ತಾಕ್‌ಗೆ ಮಾತ್ರವಲ್ಲ, ಯಾವ ದಲಿತ ಮಹಿಳೆಯರಿಗೂ ಅವಕಾಶವಿಲ್ಲ’ ಎಂದು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ದಲಿತ ಮಹಿಳೆಯರಿಗೆ ಅವಮಾನ ಮಾಡಿ, ಅಸ್ಪೃಶ್ಯತೆ ಆಚರಿಸಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮುನ್ನಡೆ ಆಗ್ರಹಿಸಿದೆ.
ಶನಿವಾರ ಮಹಿಳಾ ಮುನ್ನಡೆಯ ರಾಜ್ಯ ಸಮಿತಿ ಸದಸ್ಯೆ ಪವಿತ್ರಾ ಪತ್ರಿಕಾ ಹೇಳಿಕೆ ನೀಡಿದ್ದು, ನಮ್ಮ ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಹೇಳುತ್ತದೆ. ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಯತ್ನಾಳ್ ಸಂವಿಧಾನದ ಮೂಲ ಆಶಯಗಳಿಗೆ ತದ್ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಾ, ನಾಡಿನ ಜನತೆಯಲ್ಲಿ ಅಸ್ಪೃಶ್ಯತೆ, ಕೋಮುವಾದ, ವಿಷ ಬೀಜವನ್ನು ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಾ ಮಹಿಳೆಯರ ಬಗ್ಗೆ ಅಗೌರವದಿಂದಲೇ ಹೇಳಿಕೆ ನೀಡುವ ಇಂತಹ ಶಾಸಕರಿಗೆ ಸರಕಾರ ಮತ್ತು ನ್ಯಾಯಾಲಯ ತಕ್ಕ ಪಾಠ ಕಲಿಸಬೇಕು. ಜಾತಿ, ಧರ್ಮಗಳ ನಡುವೆ ಸೌಹಾರ್ದ ಭಾವನೆಯನ್ನು ಉತ್ತೇಜಿಸುವ ಬದಲಿಗೆ, ಕೋಮುದ್ವೇಷವನ್ನು ಬಿತ್ತುವುದೇ ಆದ್ಯತೆಯನ್ನಾಗಿಸಿಕೊಂಡಿದ್ದಾನೆ. ಇಂತಹ ಮನುಸ್ಮೃತಿ ಮನಸ್ಥಿತಿಯುಳ್ಳ ಯತ್ನಾಳ ಜನಪ್ರತಿನಿಧಿಯಾಗಲು ಯೋಗ್ಯನಲ್ಲ ಎಂದು ಅವರು ಖಂಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕೆಎಂಎಫ್ ಉತ್ಪನ್ನಗಳ ಮೇಲಿನ ದರ ಇಳಿಕೆ, ಹಾಲು & ಮೊಸರಿನ ದರ ಯಥಾಸ್ಥಿತಿ: ಬಿ. ಶಿವಸ್ವಾಮಿ
ದಮನಿತ ಸಮುದಾಯದ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಕೀಳು ಮಾನೋಭಾವ ಹೊಂದಿರುವ ಯತ್ನಾಳ್‌ರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಮತ್ತು ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಬೇಕು. ದಲಿತ ಸಮುದಾಯದ ಮಹಿಳೆರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಮಹಿಳಾ ಮುನ್ನಡೆ ಸಂಘಟನೆಯ ಪವಿತ್ರಾ ಆಗ್ರಹಿಸಿದ್ದಾರೆ.
