ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6670 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಯಲ್ಲಿ ಅಪರ ಪೊಲೀಸ್ ಮಹಾ ನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಬಿ ಕೆ ಸಿಂಗ್ ಅವರ ನೇತೃತ್ವದಲ್ಲಿ ಎಸ್‌ಐಟಿ(ವಿಶೇಷ ತನಿಖಾ ತಂಡ) ತಂಡ ರಚಿಸಿದೆ.
ವಿಶೇಷ ಏನಂದರೆ ಹಿರಿಯ ಐಪಿಎಸ್ ಅಧಿಕಾರಿ ಬಿ ಕೆ ಸಿಂಗ್ ಅವರ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚನೆಯಾಗುವ ಬಗ್ಗೆ ಈದಿನ ಡಾಟ್ ಕಾಂ ಈ ಮೊದಲೇ ವಿಶೇಷ ವರದಿ ಪ್ರಕಟಿಸಿತ್ತು.
ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ರಚನೆಯಾದ ಈ ವಿಶೇಷ ತನಿಖಾ ತಂಡದಲ್ಲಿ ಸಿಐಡಿಯ ಸಿಸಿಡಿ ವಿಭಾಗದ ಪೊಲೀಸ್ ಅಧೀಕ್ಷಕ ಸೈದುಲು ಅದಾವತ್ ಮತ್ತು ಎಸ್‌ಇಡಿ ವಿಭಾಗದ ಪೊಲೀಸ್ ಅಧೀಕ್ಷಕ ಶುಭಾನ್ವಿತ ಅವರು ಸದಸ್ಯರಾಗಿದ್ದಾರೆ. ಎಸ್‌ಐಟಿ ತಂಡವು ರಾಜ್ಯದ ಎಲ್ಲಾ ಮತಗಳ್ಳತನ ಪ್ರಕರಣಗಳನ್ನ ತನಿಖೆ ನಡೆಸಲಿದೆ.
ಸರ್ಕಾರದ ಆದೇಶ ಸಂಖ್ಯೆ ಎಚ್‌ಡಿ 194 ಸಿಒಡಿ 2025ರ ಅಡಿ ಈ ತಂಡಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 2(ಯು)ರಡಿ ಪೊಲೀಸ್ ಠಾಣಾಧಿಕಾರ ನೀಡಲಾಗಿದ್ದು, ಕರ್ನಾಟಕ ರಾಜ್ಯದಾದ್ಯಂತ ವ್ಯಾಪ್ತಿಯೊಂದಿಗೆ ತನಿಖೆ ನಡೆಸಲು ಅಧಿಕಾರ ನೀಡಲಾಗಿದೆ. ತಂಡವು ಸಿಐಡಿ ಮತ್ತು ಸ್ಥಳೀಯ ಪೊಲೀಸ್ ಸಂಪನ್ಮೂಲಗಳನ್ನು ಬಳಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ, ಶೀಘ್ರವೇ ವರದಿಯನ್ನು ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಈ ತಂಡಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಒದಗಿಸುವಂತೆಯೂ ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!
ಈ ಪ್ರಕರಣದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾಗಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದ್ದು, ರಾಜ್ಯದಾದ್ಯಂತ ಇದೇ ರೀತಿಯ ಅನಧಿಕೃತ ಕೃತ್ಯಗಳು ನಡೆದಿರುವ ಸಾಧ್ಯತೆಯನ್ನು ಪರಿಗಣಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ದೂರುದಾರರಾದ ಮಮತಾ ಕುಮಾರಿ ಅವರ ವಿಚಾರಣೆ ವರದಿಯ ಆಧಾರದಲ್ಲಿ ಪ್ರಾರಂಭವಾದ ತನಿಖೆಯು ಇದೀಗ ಎಸ್‌ಐಟಿಗೆ ವರ್ಗಾವಣೆಯಾಗಿದ್ದು, ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ವ್ಯವಸ್ಥೆಯ ನಂಬಿಕೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ ಅವರ ಸಹಿಯೊಂದಿಗೆ ಜಾರಿಯಾದ ಈ ಆದೇಶವು ರಾಜ್ಯಪಾಲರ ಹೆಸರಿನಲ್ಲಿ ನೀಡಲಾಗಿದೆ.
ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಾರಂಭವಾದ ಈ ಪ್ರಕರಣವು, ಆಯೋಗದ ಪರಿಶೀಲನೆಯಲ್ಲಿ 6018 ಮತದಾರರ ಹೆಸರುಗಳನ್ನು ಕೈಬಿಡಲು ಸಲ್ಲಿಸಲಾದ ಅರ್ಜಿಗಳಲ್ಲಿ ಕೇವಲ 24 ಮಾತ್ರ ನಿಯಮಾನುಸಾರವಾಗಿದ್ದು, ಉಳಿದ 5994 ಅರ್ಜಿಗಳು ದುರುದ್ದೇಶಪೂರ್ವಕವಾಗಿ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಸಲ್ಲಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಳಂದ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂಗಳಾದ 182, 419, 464 ಮತ್ತು 465ರ ಅಡಿ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 26/2023 ದಾಖಲಾಗಿದ್ದು, ಈಗ ರಾಜ್ಯದ ಇತರ ಠಾಣೆಗಳಲ್ಲಿ ಇದೇ ರೀತಿಯ ಪ್ರಕರಣಗಳ ಸಮಗ್ರ ತನಿಖೆಗೆ ಎಸ್‌ಐಟಿ ರಚನೆಯಾಗಿದೆ.
