ಸರಕಾರಿ ಪ್ರಥಮ ದರ್ಜೆ ಕಾಲೇಜು(ಪದವಿ)ಗಳು ಆರಂಭವಾಗಿ ಎರಡು ತಿಂಗಳು ಕಳೆಯಲು ಬಂದರೂ ಅತಿಥಿ ಉಪನ್ಯಾಸಕರ ನೇಮಕವಾಗದೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಸಮಸ್ಯೆ ಗೋಚರವಾಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬೆನಕೊಪ್ಪ ಶಂಕ್ರಪ್ಪ ಸಿಂಹಾಸನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುತ್ತ ಮುತ್ತಲಿರುವ ಗ್ರಾಮಗಳಿಂದ 2,500ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದ್ದಾರೆ. ಆದರೆ ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಮತ್ತೆ ಊರಿನತ್ತ ಮುಖ ಮಾಡುತ್ತಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿಗೆ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಆಗಸ್ಟ್ ತಿಂಗಳಿಂದ ತರಗತಿಗಳು ಆರಂಭವಾಗಿವೆ. ಒಂದು ದಿನಕ್ಕೆ ಏಳರಿಂದ ಎಂಟು ತರಗತಿಗಳು ನಡೆಯಬೇಕಿತ್ತು. ಆದರೆ ಅತಿಥಿ ಉಪನ್ಯಾಸಕರು ನೇಮಕವಾಗದೇ ಇರುವುದರಿಂದ ಈವರೆಗೆ ದಿನಕ್ಕೆ ಒಂದು ಅಥವಾ ಎರಡು ತರಗತಿಗಳು ನಡೆಯುತ್ತಿವೆ.

ಈ ಪದವಿ ಕಾಲೇಜಿನಲ್ಲಿ ಆರ್ಟ್ಸ್(ಬಿಎ), ಸೈನ್ಸ್(ಬಿಎಸ್‌ಸಿ), ಕಾಮರ್ಸ್(ಬಿಕಾಂ) ವಿಷಯಗಳಿಗೆ ವಿದ್ಯಾರ್ಥಿಗಳು ಪದವಿ ಪ್ರವೇಶ ಪಡೆದಿದ್ದು, ವಿದ್ಯಾರ್ಥಿಗಳು ನಿತ್ಯವೂ ಕಾಲೇಜಿಗೆ ಬರುತ್ತಾರೆ. ಆದರೆ ಉಪನ್ಯಾಸಕರಿಲ್ಲದೆ ಕಾರಣ ತರಗತಿಗಳು ನಡೆಯದಿರುವುದರಿಂದ ಸುಮ್ಮನೆ ಕಾಲೇಜಿಗೆ ಹೋಗಿ ಬರುವಂತಹ ಪರಿಸ್ಥಿತಿ ಎದುರಾಗಿದೆ.
“ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಇರುವುದರಿಂದ ಒಂದೊಂದು ತರಗತಿಗಳಿಗೆ ಮೂರು ಮೂರು ತರಗತಿಗಳನ್ನು ತೆಗೆದುಕೊಳ್ಳುವಂತಾಗಿದೆ. ದಿನಕ್ಕೆ ಒಂದೆರೆಡು ತರಗತಿಗಳು ನಡೆಯುತ್ತವೆ. ನಮಗೆ ಎಷ್ಟು ಸಾಧ್ಯ ಆಗುತ್ತದೆಯೋ ಅಷ್ಟು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸರ್ಕಾರ ಆದಷ್ಟು ಬೇಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದರೆ ಎಲ್ಲ ತರಗತಿಗಳೂ ನಡೆಯುತ್ತವೆ” ಎಂದು ಕಾಲೇಜಿನ ಖಾಯಂ ಪ್ರಧ್ಯಾಪಕರೊಬ್ಬರು ಹೇಳುತ್ತಾರೆ.
“ನಿತ್ಯವೂ ದೂರದ ಊರುಗಳಿಂದ ಕಾಲೇಜಿಗೆ ಬರುತ್ತೇವೆ. ಉಪನ್ಯಾಸಕರು ಇಲ್ಲದೇ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಸುಮ್ಮನೆ ಕಾಲೇಜಿಗೆ ಬಂದು ಹೋಗುವುದಾದರೆ, ಕಾಲೇಜಿಗೆ ಯಾಕೆ ಹೋಗಬೇಕು ಎನ್ನುವಂತಾಗಿದೆ. ಇದರಿಂದ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು” ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿನಿ ಕಳಕಮ್ಮ ಪಾಟೀಲ.

“ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಉಪನ್ಯಾಸಕರಿಲ್ಲದೆ ತರಗತಿಗಳು ನಡೆಯುತ್ತಿಲ್ಲ. ಇತ್ತ ಅತಿಥಿ ಉಪನ್ಯಾಸಕರನ್ನೂ ನೇಮಕ ಮಾಡಿಕೊಳ್ಳುತ್ತಿಲ್ಲ. ಪಠ್ಯಕ್ರಮದಲ್ಲಿ ಏನಿದೆ, ಏನಿಲ್ಲ ಎಂಬುದೂ ಗೊತ್ತಿಲ್ಲ. ಸಿಲೆಬಸ್ ಪೂರ್ಣಗೊಂಡಿಲ್ಲ, ಪ್ರಾಯೋಗಿಕ ತರಗತಿಗಳು ನಡೆದಿಲ್ಲ. ಮುಂದಿನ ತಿಂಗಳು ಟೆಸ್ಟ್, ಸೆಮ್ ಪರೀಕ್ಷೆಗಳು ಆರಂಭವಾಗುತ್ತವೆ. ಪರೀಕ್ಷೆಯಲ್ಲಿ ಏನು ಬರೆಯಬೇಕು ಎಂಬುದೇ ತಿಳಿಯುತ್ತಿಲ್ಲ” ಎನ್ನುತ್ತಾರೆ ಸೈನ್ಸ್ ವಿದ್ಯಾರ್ಥಿಗಳು.
ಈ ಕುರಿತು ಎಸ್‌ಎಫ್‌ಐ ಕಾರ್ಯಕರ್ತರು ಮಾತನಾಡಿ, “ಎರಡು ತಿಂಗಳು ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರು ನೇಮಕವಾಗಿಲ್ಲ. ನೇಮಕ ಮಾಡುವುದರಲ್ಲಿ ಗೊಂದಲ ಉಂಟಾಗಿದೆ. ಅರ್ಹತೆ ಇರುವವರನ್ನು, ಅಥವಾ ಅರ್ಹತೆ ಇಲ್ಲದೇ ಸೇವಾ ಅನುಭವದಲ್ಲಿ ಇರುವವರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ವಿಷಯ ಕೋರ್ಟಿನಲ್ಲಿದೆ. ಇದರಿಂದ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಪಾಠ ನಡೆಯದಿದ್ದರೆ ಮುಂದಿನ ಭವಿಷ್ಯ ಹೇಗೆ ನಡೆಯಬೇಕು. ಹಾಗಾಗಿ ಸರ್ಕಾರ ತಕ್ಷಣ ಒಂದು ತೀರ್ಮಾನ ತೆಗೆದುಕೊಂಡು ಆದಷ್ಟು ಬೇಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ಸರ್ಕಾರ ಪದವಿ ವಿದ್ಯಾರ್ಥಿಗಳ ಜೀವನದ ಜತೆಗೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಪಾಠ ಕೇಳಲು ಆಗುತ್ತಿಲ್ಲ. ಉನ್ನತ ಶಿಕ್ಷಣ ಸಚಿವರು, ಸಂಬಂಧಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಮುಗಿಯದ ಅತಿಥಿ ಉಪನ್ಯಾಸಕ ಅಳಲು
ಎರಡ್ಮೂರು ವರ್ಷಗಳಿಂದ ಅತಿಥಿ ಉಪನ್ಯಾಸಕರ ಸಮಸ್ಯೆ ಇನ್ನೂ ಬಗೆಹರಿಯುತ್ತಿಲ್ಲ. ಸರ್ಕಾರ ಅಥವಾ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. 2018ರಲ್ಲಿ ಯುಜಿಸಿ ಮಾನದಂಡದ ಅನ್ವಯ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಉಪನ್ಯಾಸಕರು, ಪ್ರಧ್ಯಾಪಕರರು ಕಡ್ಡಾಯವಾಗಿ ನೆಟ್, ಕೆಸೆಟ್ ಅಥವಾ ಪಿಎಚ್ ಡಿ ಪಡೆದಿರಬೇಕು. ಈಗ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಶೇ.50ರಷ್ಟು ಯುಜಿಸಿ ನಿಗದಿಪಡಿಸಿದ ಮಾನದಂಡದ ಪ್ರಕಾರ ಅರ್ಹತೆ ಹೊಂದಿಲ್ಲ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಹನ್ನೊಂದು ತಿಂಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿದೀರಾ? ಗದಗ | ಅನುಕಂಪದ ಆಧಾರದ ಮೇಲೆ ನೀಡುವ ಗ್ರೂಪ್ ‘ಡಿ’ ಹುದ್ದೆಗೆ ಮರಣ ಶಾಸನ ಬರೆದ ಕರ್ನಾಟಕ ಸರಕಾರ: ಮುತ್ತು ಬಿಳಿಯಲಿ
ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರಿಲ್ಲದೇ ಸರ್ಕಾರಿ ಪದವಿ ಕಾಲೇಜು ನಡೆಸುವುದು ಕಷ್ಟವಾಗಿದೆ. ಯುಜಿಸಿ ನಿಗದಿಪಡಿಸಿರುವ ಅರ್ಹತೆ ಮಾನದಂಡ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಈದಿನ.ಕಾಮ್ ಜತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹಣಮಂತ ಕಲ್ಮನಿ ಮಾತನಾಡಿ, “ಯುಜಿಸಿ ನಿಯಮ ಈಗ ಬಂದಿದೆ. ಹಿಂದಿನಿಂದಲೂ ಸೇವೆಯನ್ನು ಸಲ್ಲಿಸುತ್ತ ಬಂದಿರುವ ಅತಿಥಿ ಉಪನ್ಯಾಸಕರಿಗೆ ಹೊಸ ಕಾನೂನು ತಂದು ಖಾಯಂ ನೇಮಕ ಮಾಡಿಕೊಳ್ಳಬೇಕು. ಹಾಗೂ ಅವರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಒಂದು ವೇಳೆ ಈ ಬೇಡಿಕೆ ಈಡೇರದಿದ್ದರೆ ಕಾನೂನು ಸಚಿವರ ಮನೆ ಎದುರು ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.