ಹಣ ಪಣಕ್ಕಿಟ್ಟು ಆಟವಾಡುವ ಎಲ್ಲ ತರಹದ ಆನ್‌ಲೈನ್ ಗೇಮ್‌ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಕಠಿಣ ಕಾಯ್ದೆ ರೂಪಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲೂ ಈ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ʼರಮ್ಮಿ ಜೂಜಾಟ ಸೇರಿದಂತೆ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ-2025 ಈಗಾಗಲೇ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಅ.1ರಿಂದ ಹೊಸ ಕಾಯ್ದೆಯಡಿ ಕಠಿಣ ನಿಯಮ ಜಾರಿಗೊಳ್ಳಲಿವೆ. ಈ ಕಾಯ್ದೆ ಜಾರಿ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಐತಿಹಾಸಿಕ ದಿಟ್ಟ ಹೆಜ್ಜೆ ಇರಿಸಿದೆʼ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಆನ್‌ಲೈನ್ ಆ್ಯಪ್ ಗೇಮಿಂಗ್ ನಿಷೇಧ ಕಾಯ್ದೆಯು ಯುವಸಮೂಹ ಈ ಚಟಕ್ಕೆ ದಾಸರಾಗುವುದನ್ನು ತಡೆಗಟ್ಟಲಿದೆ. ಹಣಕಾಸು ವಂಚನೆ, ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕಲಿದೆ. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ 1 ಕೋಟಿ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಿರುವುದು ಸ್ತುತ್ಯಾರ್ಹವಾಗಿದೆ. ಈ ನಿಷೇಧ ಕಾಯ್ದೆ ಜಾರಿಯಿಂದಾಗಿ ಅನೇಕ ಕುಟುಂಬಗಳ ಆರ್ಥಿಕ ಸ್ಥಿರತೆ ಕಾಪಾಡಲಿದೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಕಾಯ್ದೆ ವರದಾನ ಎನಿಸಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ʼಆನ್‌ಲೈನ್ ಗೇಮಿಂಗ್ ನಲ್ಲಿ ಹಣ ಕಳೆದುಕೊಂಡು ಅಸಂಖ್ಯಾತ ಕುಟುಂಬ ಬೀದಿಗೆ ಬಿದ್ದಿವೆ. ಅನೇಕರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಯುವ ಪೀಳಿಗೆಯ ಭವಿಷ್ಯ ಹಾಳು ಮಾಡುವ ಆನ್‌ಲೈನ್ ಗೇಮಿಂಗ್ ಗಳು ಸಮಾಜದಲ್ಲಿ ಗಂಭೀರ ಸಮಸ್ಯೆ ಸೃಷ್ಟಿಸುತ್ತಿವೆʼ ಎಂದರು.
ಇದನ್ನೂ ಓದಿ : ಪ್ರತ್ಯೇಕ ಧರ್ಮದ ಪ್ರಯತ್ನ ಮುಂದುವರಿಯಲಿದೆ, ವೀರಶೈವ-ಲಿಂಗಾಯತವೇ ನಮ್ಮ ನಿಲುವು: ಈಶ್ವರ ಖಂಡ್ರೆ
ʼಸಾಮಾಜಿಕ ವ್ಯವಸ್ಥೆ ಜೊತೆಗೆ ಶಿಕ್ಷಣ, ಉದ್ಯೋಗ, ಕುಟುಂಬ ಜೀವನಗಳ ಮೇಲೂ ದುಷ್ಪರಿಣಾಮ ಬೀರುವ ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಸಮಾಜ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಕಾಯ್ದೆಯ ಕಠಿಣ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು. ಇಲ್ಲದಿದ್ದರೆ ಪಕ್ಷ ಜನಹಿತದಿಂದ ಹೋರಾಟ ನಡೆಸುವುದು ಅನಿವಾರ್ಯʼ ಎಂದು ಶಾಸಕ ಬೆಲ್ದಾಳೆ ಎಚ್ಚರಿಸಿದ್ದಾರೆ.